×
Ad

ಉಡುಪಿ: ಹಲ್ಲೆ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಶಂಕರ್ ಶಾಂತಿ ಆಗ್ರಹ

Update: 2021-03-22 17:37 IST

ಉಡುಪಿ, ಮಾ.22: ‘ನನ್ನ ಮೇಲಿನ ಹಲ್ಲೆ ಪ್ರಕರಣದಲ್ಲಿ ಇಡೀ ವ್ಯವಸ್ಥೆಯೇ ಆರೋಪಿಗಳ ಪರವಾಗಿ ನಿಂತಿದೆ. ರಾಜಕೀಯ ಪ್ರಭಾವದಿಂದ ಪೊಲೀಸರ ಮೇಲೆ ಬಹಳಷ್ಟು ಒತ್ತಡಗಳಿವೆ. ಆದುದರಿಂದ ಈ ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು ಎಂದು ಆರ್‌ಟಿಐ ಕಾರ್ಯಕರ್ತ ಶಂಕರ್ ಶಾಂತಿ ಆಗ್ರಹಿಸಿದ್ದಾರೆ.

ಮಾರಣಾಂತಿಕ ಹಲ್ಲೆಯಿಂದ ಕಳೆದ ಹಲವು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಇದೀಗ ಬಿಡುಗಡೆಗೊಂಡು ನೇರವಾಗಿ ಉಡುಪಿ ಪ್ರೆಸ್‌ಕ್ಲಬ್‌ಗೆ ಆಗಮಿಸಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ನನ್ನಿಂದ ತಪ್ಪಾಗಿದ್ದರೆ ನಾನು ಕೂಡ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ. ಮುಂದೆ ಈ ರೀತಿ ಯಾವ ಆರ್‌ಟಿಐ ಕಾರ್ಯಕರ್ತರ ಮೇಲೂ ದಾಳಿಯಾಗಬಾರದು ಎಂದು ಅವರು ತಿಳಿಸಿದರು.

ನನ್ನ ಮೇಲೆ ಕಾಳಿಕಾಂಬ ದೇವಸ್ಥಾನಕ್ಕೆ ಸಂಬಂಧಪಟ್ಟ ಅಡುಗೆ ಕೋಣೆ ಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದ್ದರೂ ದೇವಸ್ಥಾನದವರು ಅದನ್ನು ಇಲ್ಲ ಎಂದು ನಿರಾಕರಿಸಿದ್ದಾರೆ. ಅದೇ ರೀತಿ ನಾನೇ ದೇವಳದ ಕಿಟಕಿ ಗಾಜನ್ನು ಒಡೆದು ಕೋಳಿ ರಕ್ತವನ್ನು ಮೈಗೆ ಹಚ್ಚಿಕೊಂಡು ಪೊಲೀಸರಿಗೆ ದೂರು ನೀಡಿ ರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಆದುದರಿಂದ ನಾನು ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಮಾ.24ರಂದು ಬೆಳಗ್ಗೆ 11ಗಂಟೆಗೆ ಕಾಳಿಕಾಂಬೆ ಮತ್ತು ಅಲ್ಲಿ ರುವ ಕಲ್ಲುಕಟ್ಟಿಗ ಸಾನಿಧ್ಯಕ್ಕೆ ಸತ್ಯ ಪ್ರಮಾಣಕ್ಕೆ ಆಹ್ವಾನಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಅದೇ ರೀತಿ ನಾನೊಬ್ಬ ಭ್ರಷ್ಟಚಾರಿ, ಹಣ ವಸೂಲಿಗಾರ ಎಂಬುದಾಗಿ ಅಪಪ್ರಚಾರ ಮಾಡುತ್ತಿರುವ ಜಿಪಂ ಮಾಜಿ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಅವರನ್ನು ಕೂಡ ಸತ್ಯ ಪ್ರಮಾಣಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಹ್ವಾನಿಸುತ್ತಿದ್ದೇನೆ.  ನಾನು ಆರ್‌ಟಿಐ ಹೆಸರಿನಲ್ಲಿ ಹಲವು ಮಂದಿಯನ್ನು ಬ್ಲಾಕ್‌ಮೇಲ್ ಮಾಡಿ ರುವುದಾಗಿ ಆರೋಪಿಸಲಾಗುತ್ತಿದೆ. ಈ ಬಗ್ಗೆ ನಾನು ಸತ್ಯಪ್ರಮಾಣಕ್ಕೆ ಸಿದ್ಧನಿ ದ್ದೇನೆ ಎಂದು ಹೇಳಿದರು.

ನನ್ನ ಕೊಲೆಯತ್ನದ ಹಿಂದೆ ಬಾರಕೂರು ಶಾಂತರಾಮ ಶೆಟ್ಟಿ, ಬಿ.ಎನ್. ಶಂಕರ ಪೂಜಾರಿ, ಭಾಸ್ಕರ ಪೂಜಾರಿ ಸೇರಿದಂತೆ ಹಲವರು ಸೂತ್ರಧಾರಿಗಳಾ ಗಿದ್ದಾರೆ. ಈ ಹಿಂದೆ ಕೂಡ ನನ್ನನ್ನು ಎರಡು ಮೂರು ಬಾರಿ ಕೊಲ್ಲಲು ಪ್ರಯತ್ನ ಮಾಡಲಾಗಿತ್ತು. ಈಗಲೂ ನನ್ನ ಜೀವಕ್ಕೆ ಅಪಾಯ ಇದೆ. ಆದುದರಿಂದ ಎಸ್ಪಿಯವರು ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ, ಆರ್‌ಟಿಐ ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು, ಕರವೇ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ, ಪ್ರಮೋದ್ ಉಚ್ಚಿಲ ಉಪಸ್ಥಿತರಿದ್ದರು.

ಉಪವಾಸ ಸತ್ಯಾಗ್ರಹದ ಎಚ್ಚರಿಕೆ

ಬಾರಕೂರು ಜೈನ ಬಸದಿ ಅತಿಕ್ರಮಣ ಪ್ರಕರಣವನ್ನು ತಾರ್ಕಿಕ ಅಂತ್ಯದ ವರೆಗೆ ತೆಗೆದುಕೊಂಡು ಹೋಗಿದ್ದೇನೆ. ತಹಶೀಲ್ದಾರ್ ನೋಟೀಸ್ ನೀಡಿ ಬಸದಿ ಜಾಗವನ್ನು ತೆರವುಗೊಳಿಸುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ ಇನ್ನು ಆ ಜಾಗವನ್ನು ತೆರವುಗೊಳಿಸಿಲ್ಲ. ಕೂಡಲೇ ಈ ಜಾಗವನ್ನು ಜಿಲ್ಲಾಧಿಕಾರಿ ತೆರವುಗೊಳಿಸಿ ಸರಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಂಕರ್ ಶಾಂತಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News