ಎಸೆಸೆಲ್ಸಿ ವಿದ್ಯಾರ್ಥಿ ಪಾಲಕರ ಮನೆಗಳಿಗೆ ಉಡುಪಿ ಡಿಸಿ ಭೇಟಿ
ಹೆಬ್ರಿ, ಮಾ.22: ಸೋಮೇಶ್ವರ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಲಕರ ಮನೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದ ಅಧಿಕಾರಿಗಳ ತಂಡ ಮಾ.20ರಂದು ಭೇಟಿ ನೀಡಿತು.
ಜಿಲ್ಲಾಧಿಕಾರಿಗಳು, ಮನೆಯಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಕೇಳಿದರು. ವಿದ್ಯಾರ್ಥಿ ಗಳಿಗೆ ಹಲವು ಪ್ರಶ್ನೆಗಳನ್ನು ಕೇಳಿದ ಡಿಸಿ, ಉತ್ತಮ ಓದುವ ಕಲೆಯನ್ನು ತಿಳಿ ಹೇಳಿದರು. ಒತ್ತಡ ರಹಿತ ಕಲಿಕೆ ಮಾಡಲು ಸೂಚಿಸಿದರು. ಎರಡು ವಾರಗಳ ಅಂತರದಲ್ಲಿ ತಂದೆ ತಾಯಿ, ಅಜ್ಜಿ ತೀರಿಕೊಂಡ ಪರಿಣಾಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮನೋಸ್ಥೈರ್ಯ ತುಂಬುವ ಕಾರ್ಯವನ್ನು ಡಿಸಿ ಮಾಡಿದರು. ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಮಕ್ಕಳ ಕಲಿಕೆಗೆ ಮನೆಯಲ್ಲಿ ಉತ್ತಮ ವಾತಾವರಣ ಒದಗಿಸಬೇಕು. ಒತ್ತಡ ರಹಿತ ಕಲಿಕೆಗೆ ಮಕ್ಕಳನ್ನು ಪ್ರೇರೇಪಿಸಲು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಪೋಷಕರಿಗೆ ತಿಳಿಸಿದರು. ಎಸೆಸೆಲ್ಸಿ ಫಲಿತಾಂಶ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ಜಾರಿ ಇರುವ ಮಿಷನ್ 100ಗೆ ಉತ್ತಮ ಫಲ ನೀಡಲೆಂದು ಡಿಸಿ ಹಾರೈಸಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ವಿಭಾಗದ ಸಹಾಯಕ ಆಯುಕ್ತ ರಾಜು, ಡಿಡಿಪಿಐ ಎನ್.ಎಚ್.ನಾಗೂರ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್., ಹೆಬ್ರಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ದಿವಾಕರ ಮೊದಲಾದವರು ಉಪಸ್ಥಿತರಿದ್ದರು.