×
Ad

ಉಡುಪಿ: ಎಂಐಟಿಯ 72 ಸೇರಿ 113 ಮಂದಿಗೆ ಕೊರೋನ ಪಾಸಿಟಿವ್

Update: 2021-03-22 20:48 IST

ಉಡುಪಿ, ಮಾ.22: ಜಿಲ್ಲೆಯಲ್ಲಿ ಸೋಮವಾರ ಸಹ 113 ಪ್ರಕರಣಗಳಲ್ಲಿ ಕೋವಿಡ್ ‌ಪಾಸಿಟಿವ್ ಕಂಡು ಬಂದಿದ್ದು, ಇದರಲ್ಲಿ 72 ಕೇಸು ಎಂಐಟಿ ವಿದ್ಯಾರ್ಥಿಗಳದೇ ಆಗಿದೆ. ಈ ಮೂಲಕ ಎಂಐಟಿ ಕ್ಯಾಂಪಸ್ ಒಂದರಲ್ಲೇ ಕಳೆದ ಒಂದು ವಾರದಿಂದ ಪತ್ತೆಯಾದ ಕೋವಿಡ್ ಸೋಂಕಿತರ ಸಂಖ್ಯೆ 372ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಅ. 25ರ ಬಳಿಕ ಸತತ ಎರಡು ದಿನ 100ಕ್ಕೂ ಅಧಿಕ ಮಂದಿ ಸೋಂಕಿಗೆ ಪಾಸಿಟಿವ್ ಬರುತ್ತಿರುವುದು ಇದೇ ಮೊದಲು. ಸೋಂಕಿಗೆ ಪಾಸಿಟಿವ್ ಪತ್ತೆಯಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು, ಸದ್ಯ ದೇಶದಲ್ಲಿ ಕೊರೋನ ವಿಪರೀತ ಹೆಚ್ಚಳ ಕಂಡುಬಂದಿರುವ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದವರು ಎಂದು ಡಾ.ಸೂಡ ತಿಳಿಸಿದರು.

ಎಂಐಟಿಯಲ್ಲಿ ಈಗ ಪಾಸಿಟಿವ್ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಈಗಾಗಲೇ ಪಾಸಿಟಿವ್ ಬಂದ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ಎಂಐಟಿಯಲ್ಲಿ ಸದ್ಯ ಪಾಸಿಟಿವ್ ಬರುತ್ತಿರುವ ಪ್ರಮಾಣ ಶೇ.20 ಆಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಜಿಲ್ಲೆಯ ಇನ್ನೂ ಎರಡು ವಿದ್ಯಾಸಂಸ್ಥೆಗಳಲ್ಲಿ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಕೋವಿಡ್‌ಗೆ ಪಾಸಿಟಿವ್ ಬಂದಿರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿದ್ದೆ ಗೆಡಿಸಿದೆ.

ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 10 ಮಂದಿ ವಿದ್ಯಾರ್ಥಿಗಳು ಇಂದು ಪಾಸಿಟಿವ್ ಬಂದಿದ್ದಾರೆ. ಅಲ್ಲದೇ ಕಾಪು ತಾಲೂಕು ಕುರ್ಕಾಲು ಗ್ರಾಮದ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಆನಂದತೀರ್ಥ ವಸತಿ ಶಾಲೆಯ ಒಟ್ಟು 10 ಮಂದಿ ವಿದ್ಯಾರ್ಥಿಗಳು ಸಹ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ ಎಂದು ಅವರು ವಿವರಿಸಿದರು.

ಉಡುಪಿ: ದಿನದಲ್ಲಿ 32 ಮಂದಿ ಗುಣಮುಖ

ಸೋಮವಾರ ಜಿಲ್ಲೆಯಲ್ಲಿ 113 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದರೆ, 32 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ ಈಗ ಒಮ್ಮಿಂದೊಮ್ಮೆಗೆ 439ಕ್ಕೆ ನೆಗೆದಿದೆ ಎಂದು ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ.

ಸೋಮವಾರ ಪಾಸಿಟಿವ್ ಬಂದವರಲ್ಲಿ 60 ಮಂದಿ ಪುರುಷರು ಹಾಗೂ 53 ಮಂದಿ ಮಹಿಳೆಯರು. ಇವರಲ್ಲಿ 84 ಮಂದಿ ಉಡುಪಿ ತಾಲೂಕಿನವ ರಾದರೆ, 10 ಮಂದಿ ಕುಂದಾಪುರ ಹಾಗೂ 18 ಮಂದಿ ಕಾರ್ಕಳ ತಾಲೂಕಿನವರು. ಉಳಿದೊಬ್ಬರು ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಮಣಿಪಾಲಕ್ಕೆ ಬಂದವರಾಗಿದ್ದಾರೆ. ಇವರಲ್ಲಿ 106 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಹಾಗೂ ಏಳು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು ತಿದ್ದಾರೆ. ಇಂದು 32 ಮಂದಿ ಸೋಂಕಿನಿಂದ ಗುಣ ಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 23,699ಕ್ಕೇರಿದೆ.

ರವಿವಾರ ಜಿಲ್ಲೆಯ 2741 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿ ಕೊಂಡಿದ್ದಾರೆ. ಇಂದಿನ 113 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 24,328 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,97,783 ಮಂದಿ ಕೋವಿಡ್ ಪರೀಕ್ಷೆ ಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ಗೆ ಯಾರೂ ಬಲಿ ಯಾಗಿಲ್ಲ. ಈವರೆಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 190 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News