ಸರೋಜಿನಿ ಮಹಿಷಿ ವರದಿ ಜಾರಿಗೆ ಇಂಟಕ್ ಒತ್ತಾಯ
Update: 2021-03-22 21:58 IST
ಮಂಗಳೂರು, ಮಾ.22: ಕುದುರೆಮುಖ ಅದಿರು ಕಂಪೆನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಮಾಡಿಕೊಡುವ ಸಲುವಾಗಿ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವ ಕುರಿತಂತೆ ಇಂಟಕ್ ಬೆಂಬಲಿತ ಕುದುರೆಮುಖ ಶ್ರಮಶಕ್ತಿ ಸಂಘಟನೆಯು ಕಂಪೆನಿಯ ಸಿಎಂಡಿ ಕೆ.ಸುಬ್ಬರಾವ್ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.
ಕಂಪೆನಿಯಲ್ಲಿ ದಕ್ಷಿಣ ಕನ್ನಡದ ಪ್ರತಿಭಾವಂತ ಅರ್ಹ ಯುವಕರಿಗೆ, ಸಂಸ್ಥೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಉದ್ಯೋಗ ಮಾಡುತ್ತಿರುವ ನೌಕರರ ಕುಟುಂಬಗಳ ಫಲಾನುಭವಿಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಒತ್ತಾಯಿಸಿದರು.
ಈ ಸಂದರ್ಭ ಕಂಪೆನಿಯ ಮಹಾಪ್ರಬಂಧಕ ಶ್ರೀನಿವಾಸ ಭಟ್, ಹಿರಿಯ ಪ್ರಬಂಧಕ ಮುರುಗೇಶ್, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಸಂಘಟನೆಯ ಕಾರ್ಯರ್ಶಿ ರಾಜ್‌ಗುರು, ಕುದುರೆಮುಖ ಶ್ರಮಶಕ್ತಿ ಸಂಘಟನೆಯ ಪ್ರಮುಖರಾದ ಪದ್ಮನಾಭ ಶೆಟ್ಟಿ, ಸುರೇಶ್ ಬಾಬು, ಲಕ್ಷ್ಮಣ್ ಪವಾರ್, ಚೆನ್ನಕೇಶವ, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.