2020ರ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ ಶೇಕ್ ಮುಜೀಬುರ್ರಹ್ಮಾನ್

Update: 2021-03-22 17:01 GMT
ಫೋಟೊ ಕೃಪೆ: twitter.com

ಹೊಸದಿಲ್ಲಿ: ಬಂಗಬಂಧು ಶೇಕ್ ಮುಜೀಬುರ್ರಹ್ಮಾನ್ ಅವರು 2020ರ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ಸೋಮವಾರ ತಿಳಿಸಿದೆ.

ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ದೂರದೃಷ್ಟಿ ಹಾಗೂ ಗಲ್ಫ್ ಪ್ರದೇಶದಲ್ಲಿ ಶಾಂತಿ ಹಾಗೂ ಅಹಿಂಸೆಯನ್ನು ಉತ್ತೇಜಿಸುವ ಪ್ರಯತ್ನವನ್ನು ಗುರುತಿಸಿ 2019ರ ಪ್ರತಿಷ್ಠಿತ ಗಾಂಧಿ ಪ್ರಶಸ್ತಿಯನ್ನು ಒಮಾನ್ ನ ದಿವಂಗತ ಸುಲ್ತಾನ್ ಖಬೂಸ್ ಬಿನ್ ಸಯೀದ್ ಅಲ್ ಸಯೀದ್  ಅವರಿಗೆ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಗಾಂಧಿ ಶಾಂತಿ ಪ್ರಶಸ್ತಿಯನ್ನು ಮಹಾತ್ಮಾ ಗಾಂಧಿಯವರ 125ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ವರ್ಷವಾದ 1995ರಲ್ಲಿ ಭಾರತ ಸರಕಾರ ಸ್ಥಾಪಿಸಿತ್ತು. ಈ ಪ್ರಶಸ್ತಿ ಪ್ರತಿ ವರ್ಷ ನೀಡಲಾಗುತ್ತಿದೆ. ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ,ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಈ ಪ್ರಶಸ್ತಿ ಎಲ್ಲರಿಗೂ ಮುಕ್ತವಾಗಿದೆ.

ಗಾಂಧಿ ಶಾಂತಿ ಪ್ರಶಸ್ತಿಯ ತೀರ್ಪುಗಾರರ ಅಧ್ಯಕ್ಷೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಹಿಸಿದ್ದು, ಜ್ಯೂರಿಯಲ್ಲಿ ಇಬ್ಬರು ಮಾಜಿ ಅಧಿಕಾರಿಗಳು, ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆಯಲ್ಲಿ ಅತಿದೊಡ್ಡ ಪ್ರತಿಪಕ್ಷದ ನಾಯಕರು ಇದ್ದಾರೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಸುಲಭ್ ಅಂತರ್ ರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯ ಸ್ಥಾಪಕರಾದ ಬಿಂದೇಶ್ವರ ಪಾಠಕ್ ಅವರೂ ತೀರ್ಪುಗಾರರಾಗಿ ಭಾಗವಹಿಸಿದ್ದರು.

2021ರ ಮಾರ್ಚ್ 19ರಂದು ಭೇಟಿಯಾದ ತೀರ್ಪುಗಾರರು ಸೂಕ್ತ ಚರ್ಚೆಯ ನಂತರ ಬಾಂಗ್ಲಾದೇಶ ಪಿತಾಮಹ ಶೇಕ್ ಮುಜೀಬುರ್ರಹ್ಮಾನ್ ಹಾಗೂ ಒಮಾನ್ ನ ದೀರ್ಘಕಾಲದ ಆಡಳಿತಗಾರ ಸುಲ್ತಾನ್ ಖಬೂಸ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News