ವಲಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ: ‘ಗಡಿ ಮುಚ್ಚಲಾಗಿದೆ’ ಎಂದ ಅಮೆರಿಕ

Update: 2021-03-22 17:59 GMT

ಮಾ. 22: ಅಮೆರಿಕದಲ್ಲಿ ಜೋ ಬೈಡನ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಲಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವಂತೆಯೇ, ‘ಗಡಿಯನ್ನು ಮುಚ್ಚಲಾಗಿದೆ’ ಎಂಬುದಾಗಿ ಸರಕಾರ ಹಿರಿಯ ಅಧಿಕಾರಿಯೊಬ್ಬರು ರವಿವಾರ ಘೋಷಿಸಿದ್ದಾರೆ.

ಅವ್ಯಾಹತ ವಲಸೆಯು ನೂತನ ಸರಕಾರಕ್ಕೆ ತಲೆನೋವಾಗಿದೆ. ವಲಸೆ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ ಎಂಬುದಾಗಿ ಟೀಕಾಕಾರರು ಆರೋಪಿಸಿದ್ದಾರೆ. ಗಡಿ ದಾಟಿ ಅಮೆರಿಕಕ್ಕೆ ವಲಸೆ ಬರುವವರಿಗೆ ಸರಕಾರದ ಸಂದೇಶ ಸ್ಪಷ್ಟವಾಗಿದೆ: ‘‘ಈಗ ಅಮೆರಿಕಕ್ಕೆ ಬರಲು ಸರಿಯಾದ ಸಮಯವಲ್ಲ. ಬರಬೇಡಿ. ಪ್ರಯಾಣವು ಅಪಾಯಕಾರಿ’’ ಎಂದು ಅಮೆರಿಕ ಆಂತರಿಕ ಭದ್ರತಾ ಕಾರ್ಯದರ್ಶಿ ಅಲೆಜಾಂಡ್ರೊ ಮಯೋರ್ಕಸ್ ಹೇಳಿದ್ದಾರೆ.

‘‘ಸಂಕಷ್ಟಕ್ಕೊಳಗಾದ ಮಕ್ಕಳ ಅಗತ್ಯಗಳನ್ನು ನಿಭಾಯಿಸುವ ಸುರಕ್ಷಿತ, ವ್ಯವಸ್ಥಿತ ಮತ್ತು ಮಾನವೀಯ ವಿಧಾನಗಳನ್ನು ನಾವು ರೂಪಿಸುತ್ತಿದ್ದೇವೆ’’ ಎಂದು ಎಬಿಸಿ ಸುದ್ದಿವಾಹಿನಿಯ ‘ದಿಸ್ ವೀಕ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದರು.

ಅಮೆರಿಕದ ಕೇಂದ್ರ ಸರಕಾರದ ಸುಪರ್ದಿಯಲ್ಲಿ ಈಗಾಗಲೇ ಸುಮಾರು 15,000 ಮಕ್ಕಳು ಅಥವಾ ಹದಿಹರೆಯದವರು ಇದ್ದಾರೆ. ಈ ವರ್ಷ ಸುಮಾರು 20 ಲಕ್ಷ ನೋಂದಾಯಿಸಲ್ಪಡದ ವಲಸಿಗರು ಅಮೆರಿಕ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಹಾಗಾಗಿ, ಅಮೆರಿಕವು ಬೃಹತ್ ವಲಸೆ ಸಮಸ್ಯೆಯೊಂದನ್ನು ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News