"ಮೋದಿ ಸರ್ಕಾರ ಅಂಫಾನ್‌ ಪರಿಹಾರಕ್ಕೆ 10,000ಕೋಟಿ ರೂ. ನೀಡಿತ್ತು, ಆದರೆ ಅದನ್ನು ಕಸಿಯಲಾಯಿತು"

Update: 2021-03-23 12:03 GMT

ಕೋಲ್ಕತ್ತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಪಶ್ಚಿಮ ಬಂಗಾಳದ ಗೋಸಾಬಾದಲ್ಲಿ ನಡೆದ ಬಿಜೆಪಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಪ್ರದೇಶವು ಕೋಲ್ಕತ್ತಾಗೆ ಹತ್ತಿರದಲ್ಲಿದ್ದರೂ, ವರ್ಷಗಳು ಕಳೆದಂತೆ ಇದು ಸಾಕಷ್ಟು ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಅಭಿವೃದ್ಧಿಯ ಕೊರತೆಯ ಕುರಿತಾದಂತೆ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್‌ ಶಾ, ದಕ್ಷಿಣ 24 ಪರಗಣಗಳಲ್ಲಿ ಬಿಜೆಪಿ ಈ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತದೆ ಎಂದು ಗೋಸಾಬಾ ರ‍್ಯಾಲಿಯಲ್ಲಿ ಅಮಿತ್ ಶಾ ಹೇಳಿದರು. "ಗೋಸಾಬಾ 9 ದ್ವೀಪಗಳಿಂದ ನಿರ್ಮಾಣವಾಗಿದೆ. ಆದರೆ ಅದು ಇನ್ನೂ ಶುದ್ಧವಾದ ಕುಡಿಯುವ ನೀರನ್ನು ಹೊಂದಿಲ್ಲ" ಎಂದು ಅವರು ಹೇಳಿದರು.

“ಮೋದಿಜಿ ಅಂಫಾನ್ ಪರಿಹಾರಕ್ಕಾಗಿ 10,000 ಕೋಟಿ ರೂ.‌ ಅನುದಾನ ನೀಡಿದ್ದನ್ನು ನೀವು ನೋಡಿದ್ದೀರಾ? 'ಭತಿಜಾ' (ಮಮತಾ ಸೋದರಳಿಯ ಅಭಿಷೇಕ್ ಬ್ಯಾನರ್ಜಿ) ಮತ್ತು ಅವರ ಸಹಚರರು ಈ ಹಣವನ್ನು ನಿಮಗೆ ನೀಡದೇ ಕಸಿದುಕೊಂಡರು ಮತ್ತು ನಿಮಗದನ್ನು ನೋಡಲೂ ಬಿಡಲಿಲ್ಲ” ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಮುಂದುವರಿದು ಮಾತನಾಡಿದ ಅಮಿತ್‌ ಶಾ, “ಆದರೆ ನೀವು ಚಿಂತಿಸಬೇಡಿ. ನಾವು ಅಧಿಕಾರಕ್ಕೆ ಬಂದ ನಂತರ ಈ ಪ್ರಕರಣದ ಕುರಿತು ತನಿಖೆ ನಡೆಸಲು ಎಸ್‌ಐಟಿಯನ್ನು ರಚಿಸುತ್ತೇವೆ ಮತ್ತು ಈ ನಿಧಿಯ ಎಲ್ಲಾ ವ್ಯತ್ಯಾಸಗಳನ್ನು ಪರಿಶೀಲಿಸುತ್ತೇವೆ. ಯಾವುದನ್ನೂ ಬಿಡುವುದಿಲ್ಲ.” ಎಂದು ಹೇಳಿಕೆ ನೀಡಿದರು.

ಬಂಗಾಳದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುವಂತೆ ಮಾಡಿದರೆ ಸುಂದರ್‌ ಬನ್ಸ್ ಪ್ರದೇಶವನ್ನು ಅಭಿವೃದ್ಧಿಪಡಿಸಲು ಬಿಜೆಪಿ 2 ಲಕ್ಷ ಕೋಟಿ ರೂ. ಖರ್ಚು ಮಾಡಲಿದ್ದು, ಈ ಪ್ರದೇಶವು ಪ್ರತ್ಯೇಕ ಜಿಲ್ಲೆಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. "ನಾವು ಸುಂದರ್ ‌ಬನ್ಸ್ ಪ್ರದೇಶಕ್ಕಾಗಿ ಅಭಿವೃದ್ಧಿ ಮಂಡಳಿಯನ್ನು ರಚಿಸುತ್ತೇವೆ ಮತ್ತು ಅದನ್ನು ರಾಜ್ಯದ ಅತ್ಯಾಧುನಿಕ ಪ್ರದೇಶವನ್ನಾಗಿ ಮಾಡುವ ಕುರಿತು ಘೋಷಿಸಿದ್ದೇವೆ" ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News