ಸೈಬರ್ ಕ್ರೈಮ್‌ಗಳ ಬಗ್ಗೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಿ: ವೀಣಾ
ಉಡುಪಿ, ಮಾ.23: ಸೈಬರ್ ಕ್ರೈಮ್ ಹಾಗೂ ಅಂತರ್ಜಾಲದಲ್ಲಿ ಮೋಸದ ಜಾಲಕ್ಕೆ ಬಲಿಯಾಗದಂತೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕಾಗಿದೆಂದು ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ತಿಳಿಸಿದ್ದಾರೆ.
ಉಡುಪಿ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ವತಿಯಿಂದ ಮಂಗಳವಾರ ಉಡುಪಿ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರ. ಸ್ತ್ರೀಯರು ಪ್ರತಿಯೊಂದು ರಂಗದಲ್ಲೂ ಬೆಳವಣಿಗೆ ಹೊಂದಿ ಸಮಾಜದ ಕೈಗನ್ನಡಿ ಯಾಗಬೇಕು. ಮಹಿಳೆ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸ್ವಾವಲಂಬನೆ ಸಾಧಿಸದ ಹೊರತು ಶಕ್ತಿ ಬರಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ 20 ಮಂದಿ ಅಕ್ಷರದಾಸೋಹದ ಅಡುಗೆ ಮಾಡುವ ಮಹಿಳಾ ಸಿಬಂದಿಗಳಿಗೆ ನೆರವು ಒದಗಿಸಲಾಯಿತು. ಉಡುಪಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಉಮಾ ಪಿ. ಮಾತನಾಡಿದರು. ಸಂಘದ ಅಧ್ಯಕ್ಷೆ ವೇದಾ ಸುವರ್ಣ, ವಿವಿಧ ವಲಯಗಳ ಪದಾಧಿಕಾರಿಗಳಾದ ಪೌಲಿನ್ ಕ್ರಾಸ್ತಾ, ಕಿಶ್ವರ್ ಕುಂದಾಪುರ, ಸುಮಿತ್ರಾ ಕುಂದರ್, ವಿನಯ ಬ್ರಹ್ಮಾವರ, ಜೆಸಿಂತಾ ಕಾಪು, ಸುನೀತಾ, ಸುನೀತಾ ಹೆಬ್ರಿ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಸದಸ್ಯೆ ಭಾರತಿ ಶಿಯಾನ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷೆ ಮರಿಯಾ ಮೊಲಿ ವಂದಿಸಿದರು. ಗೀತಾ ದಯಾನಂದ ಹಿರಿಯಡ್ಕ ಕಾರ್ಯ ಕ್ರಮ ನಿರೂಪಿಸಿದರು.