×
Ad

ಗ್ರಾಪಂಗಳಿಗೆ ತೆರಿಗೆ ಹಣ ಬಾಕಿಯಿಟ್ಟ ಕಂಪೆನಿಗಳಿಗೆ ನೋಟಿಸ್ : ಮಂಗಳೂರು ತಾಪಂ ಸಭೆ

Update: 2021-03-23 21:07 IST

ಮಂಗಳೂರು, ಮಾ.23: ಸ್ಥಳೀಯ ಗ್ರಾಪಂಗಳಿಗೆ ಪಾವತಿಸಬೇಕಾಗಿದ್ದ ಲಕ್ಷಾಂತರ ತೆರಿಗೆ ಹಣವನ್ನು ಬಾಕಿ ಇರಿಸಿದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕಂಪೆನಿಗಳಿಗೆ ನೋಟಿಸ್ ಜಾರಿಗೊಳಿಸಲು ತಾಪಂ ಇಒ ಎನ್‌ಜಿ ನಾಗರಾಜ್ ಸೂಚನೆ ನೀಡಿದ್ದಾರೆ.

ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ತಾಪಂ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮಂಗಳೂರು ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಅಗ್ನಿಶಾಮಕ ದಳ ಕಚೇರಿ ಇಲ್ಲದ ಕಾರಣ ಬೆಂಕಿ ಅವಘಡ ಸಂಭವಿಸಿದರೆ ಮಂಗಳೂರು ಅಥವಾ ಮೂಡುಬಿದಿರೆಯಿಂದ ಅಗ್ನಿಶಾಮಕ ದಳದ ವಾಹನಗಳು ಬರಬೇಕಾಗಿದೆ. ಅಲ್ಲದೆ ಟ್ರಕ್ ಪಾರ್ಕ್ ಕೂಡ ಇಲ್ಲ. ಕೆಲವು ಕಂಪೆನಿಗಳು ಸ್ಥಳೀಯ ಗ್ರಾಪಂಗೆ ಪಾವತಿಸಬೇಕಾದ ಲಕ್ಷಾಂತರ ರೂ. ತೆರಿಗೆ ಬಾಕಿ ಇರಿಸಿಕೊಂಡಿವೆ ಎಂದು ತಾಪಂ ಸದಸ್ಯ ಸುನಿಲ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ ಎನ್‌ಜಿ ನಾಗರಾಜ್ ಅಗ್ನಿಶಾಮಕ ದಳ ಘಟಕ ಆರಂಭಿಸಲು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಅಲ್ಲದೆ ತೆರಿಗೆ ಬಾಕಿ ಇರಿಸಿಕೊಂಡಿರುವ ಕಂಪೆನಿಗಳಿಗೆ ನೊಟೀಸ್ ಜಾರಿ ಮಾಡಲು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಘನತ್ಯಾಜ್ಯ ಘಟಕ: ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಯ ಸಮಸ್ಯೆ ಬಿಗಡಾಯಿಸುತ್ತಿದೆ. ಇದರ ನಿವಾರಣೆಗೆ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುವುದು. ಘನತ್ಯಾಜ್ಯ ವಿಲೇವಾರಿ ಘಟಕ ಅಂದ ತಕ್ಷಣ ತ್ಯಾಜ್ಯವನ್ನು ತಂದು ರಾಶಿ ಹಾಕುವುದಲ್ಲ. ಯಾರಿಗೂ ತೊಂದರೆಯಾಗದಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಾಗಿದೆ. ತ್ಯಾಜ್ಯ ಘಟಕದ ಬಗ್ಗೆ ಯಾರಿಗೂ ಯಾವ ತಪ್ಪು ಕಲ್ಪನೆಯೂ ಬೇಡ. ಈಗಾಗಲೆ 18 ಗ್ರಾಪಂಗಳಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿದೆ. ಸ್ಥಳೀಯರೂ ಇದಕ್ಕೆ ಆಸಕ್ತಿ ತೋರಿಸಿದ್ದಾರೆ. ಹಾಗಾಗಿ ಸದಸ್ಯರೆಲ್ಲರೂ ಇದಕ್ಕೆ ಸಹಕಾರ ನೀಡಬೇಕಿದೆ’ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಹೇಳಿದ್ದಾರೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಘನತ್ಯಾಜ್ಯ ಘಟಕಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವು ದರಿಂದ ಯಾವುದೇ ತೊಂದರೆ ಇಲ್ಲ. ಎಲ್ಲಾ ಗ್ರಾಮಗಳಲ್ಲೂ ಘನತ್ಯಾಜ್ಯ ಘಟಕಗಳ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

94ಸಿಸಿ ಅರ್ಜಿ: ಕಳೆದ ನಾಲ್ಕು ವರ್ಷಗಳಲ್ಲಿ 94 ಸಿಸಿ ಅಡಿ 22,804 ಅರ್ಜಿಗಳ ಸಲ್ಲಿಕೆಯಾಗಿದೆ. ಆ ಪೈಕಿ 16,499 ಹಕ್ಕುಪತ್ರಗಳನ್ನು ನೀಡಲಾಗಿದೆ. ತಿರಸ್ಕೃತಗೊಂಡಿರುವ 6,252 ಹಕ್ಕುಪತ್ರಗಳ ಪೈಕಿ 1,800 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. ಕೆಲವು ಜಾಗಗಳು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿದೆ ಎಂಬ ಕಾರಣ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿದ ಬಳಿಕ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಸ್ತಿ ರಕ್ಷಣೆಗೆ ಕ್ರಮ: ತಾಪಂ, ಗ್ರಾಪಂಗಳಿಗೆ ಸೇರಿದ ಕಟ್ಟಡ, ರಸ್ತೆ ಇತ್ಯಾದಿ ಆಸ್ತಿಗಳ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಂಡು ರಕ್ಷಿಸ ಬೇಕು ಎಂದು ತಹಶೀಲ್ದಾರ್ ತನ್ನ ಅಧೀನ ಅಧಿಕಾರಿಗಳಿಗೆ ಸೂಚಿಸಿದರು. 

ತಾಪಂ ಉಪಾಧ್ಯಕ್ಷೆ ಪೂರ್ಣಿಮಾ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಪ್ರತಿಭಾ ಶೆಟ್ಟಿ, ಜಿಪಂ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಉಪಸ್ಥಿತರಿದ್ದರು. ಸದಸ್ಯರಾದ ಸುನಿಲ್, ನಾಗೇಶ್ ಶೆಟ್ಟಿ, ಜೀವನ್ ಪ್ರಕಾಶ್ ವಜ್ರಾಕ್ಷಿ ಶೆಟ್ಟಿ, ಸುರೇಖಾ ಚಂದ್ರಹಾಸ್, ಶುಭಲತಾ ಶೆಟ್ಟಿ ಚರ್ಚೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News