×
Ad

‘ಸಮುದ್ರದ ಉಬ್ಬರವಿಳಿತದಿಂದ ಯುಪಿಸಿಎಲ್ ಪೈಪ್‌ಲೈನ್‌ಗೆ ಹಾನಿ’

Update: 2021-03-23 22:26 IST

ಉಡುಪಿ, ಮಾ.23: ಅರಬಿ ಸಮುದ್ರದ ಉಬ್ಬರವಿಳಿತದಿಂದಾಗಿ ಪಡುಬಿದ್ರಿ ಸಮೀಪದ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ತ್ಯಾಜಯವನ್ನು ಸಮುದ್ರಕ್ಕೆ ಕೊಂಡೊಯ್ಯುವ ಡಿಸ್‌ಚಾರ್ಜ್ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ಅದನ್ನು ಮತ್ತೆ ಜೋಡಿಸುವ ಕಾರ್ಯವನ್ನು ಯುಪಿಸಿಎಲ್ ಕಂಪೆನಿ ನಡೆಸಿದೆ ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೇಳಿದ್ದಾರೆ.

ರಾಜ್ಯ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ, ಯುಪಿಸಿಎಲ್‌ಗೆ ಸಂಬಂಧಿಸಿದಂತೆ ಕಳೆದ ವಾರ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಯುಪಿಸಿಎಲ್‌ನಿಂದ ಉತ್ಪತ್ತಿಯಾಗುವ ಕಲುಷಿತ ನೀರನ್ನು ಸಂಸ್ಕರಿಸಿ ಸಮುದ್ರಕ್ಕೆ ವಿಸರ್ಜಿಸಲು ಉದ್ದಿಮೆಯು ನೀರಿನ ಪಂಪ್‌ಹೌಸ್‌ನಿಂದ ಸಮುದ್ರ ಎರಡು ಡಿಸ್ಚಾರ್ಜ್ ಪೈಪ್‌ಲೈನ್ ಅಳವಡಿಸಿದ್ದು, ಕಡಲತೀರದಲ್ಲಿದ್ದ ವಿಸರ್ಜನೆಯ ಪೈಪ್‌ಲೈನ್ ಫೆ.20ರಂದು ಸಮುದ್ರದ ಉಬ್ಬರವಿಳಿತದ ಕಾರಣ ಹಾನಿಯಾಗಿದೆ ಎಂದು ತಿಳಿದುಬಂದಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಹಾನಿಗೊಳಗಾದ ಪೈಪ್‌ಲೈನ್‌ನ ಕವಾಟವನ್ನು ಮುಚ್ಚಲಾಗಿದ್ದು, ಅದನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಹಾನಿಗೊಳಗಾದ ಪೈಪ್‌ಲೈನ್ ಮರುಜೋಡಣೆಯ ಕಾರ್ಯವನ್ನು ಕಂಪೆನಿ ಕೈಗೆತ್ತಿಕೊಂಡಿದ್ದು, ಕೆಲಸ ಭರದಿಂದ ನಡೆಯುತ್ತಿದೆ. ವಿಸರ್ಜನಾ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸಲು ದುರಸ್ತಿ ಕಾರ್ಯವು ನಡೆಯುತಿದ್ದು, ಮುಂದಿನ ಎಪ್ರಿಲ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಕಂಪೆನಿ ತಿಳಿಸಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಉಡುಪಿಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಫೆ.23ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಮುದ್ರಕ್ಕೆ ತ್ಯಾಜ್ಯ ನೀರನ್ನು ಬಿಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ನಿರ್ದೇಶನ ನೀಡಿದ್ದರು. ಆದರೆ ಯುಪಿಸಿಎಲ್‌ನ ಎರಡೂ ಘಟಕಗಳು ಫೆ.19ರಿಂದ ಕಾರ್ಯಾಚರಣೆ ನಿಲ್ಲಿಸಿದ್ದು, ತಪಾಸಣೆಯ ವೇಳೆ ವಿದ್ಯುತ್ ಘಟಕದಿಂದ ಸಮುದ್ರಕ್ಕೆ ಯಾವುದೇ ನೀರು ವಿಸರ್ಜನೆಯಾ ಗುತ್ತಿರಲಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಕೊಟ್ಟಿರುವುದಾಗಿ ಸಚಿವರು ಉತ್ತರದಲ್ಲಿ ತಿಳಿಸಿದ್ದರು.

ಹಸಿರು ಪೀಠದಲ್ಲಿ ವರದಿ: ವಿಧಾನಪರಿಷತ್‌ನಲ್ಲಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಯುಪಿಸಿಎಲ್‌ಗೆ ಕಳೆದ ಡಿಸೆಂಬರ್ ಮೊದಲ ವಾರದಲ್ಲಿ ಭೇಟಿ ನೀಡಿದ್ದ ರಾಷ್ಟ್ರೀಯ ಹಸಿರು ಪೀಠ ನೇಮಿಸಿದ ತಜ್ಞರ ಸಮಿತಿ ನೀಡಿದ ವರದಿಯಲ್ಲಿ ಕಾರ್ಖಾನೆಯ ಮಾಲಿನ್ಯದಿಂದಾಗಿ ಪರಿಸರದ ಜನರ ಆರೋಗ್ಯ ಸಮಸ್ಯೆಗಾಗಿ 70 ಕೋಟಿ ರೂ.ದಂಡ ವಿಧಿಸಿ ಮಾಡಿರುವ ಶಿಫಾರಸ್ಸು ಹಾಗೂ ಪರಿಸರದಲ್ಲಿ ಇನ್ನಷ್ಟು ಸಮೀಕ್ಷೆ ನಡೆಸುವಂತೆ ಮಾಡಿ ರುವ ಶಿಫಾರಸ್ಸುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಈ ಎಲ್ಲಾ ವಿಷಯಗಳು (ರಾ.ಹಸಿರು ಪೀಠ) ನ್ಯಾಯಾಧೀಕರಣದ ಮುಂದೆ ಇರುತ್ತದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News