ಎ.1 ರಿಂದ ನೂತನ ಮೀನುಮಾರುಕಟ್ಟೆ ಕಾರ್ಯರಂಭ : ಪರ್ವೇಝ್ ಕಾಸಿಮ್
ಭಟ್ಕಳ : ಭಟ್ಕಳದ ಸಂತೆ ಮಾರುಕಟ್ಟೆಯಲ್ಲಿ ಮೀನುಮಾರಾಟಕ್ಕೆಂದೆ ನಿರ್ಮಿಸಿದ್ದ ನೂತನ ಮೀನು ಮಾರುಕಟ್ಟೆಯಲ್ಲಿ ಎ.1ರಿಂದ ಅಧಿಕೃತವಾಗಿ ಕಾರ್ಯರಂಭಗೊಳ್ಳುತ್ತಿದ್ದು ಈಗಿರುವ ಭಟ್ಕಳ ಪುರಸಭೆ ಮಾಲಕತ್ವದ ಹಳೆ ಮೀನು ಮಾರುಕಟ್ಟೆ ಮಾ. 31ರಿಂದ ಸ್ಥಗಿತಗೊಳ್ಳಲಿದೆ ಎಂದು ಭಟ್ಕಳ ಪುರಸಭಾಧ್ಯಕ್ಷ ಪರ್ವೇಝ್ ಕಾಸಿಮ್ ತಿಳಿಸಿದರು.
ಅವರು ಮಂಗಳವಾರ ಪುರಸಭಾಧ್ಯಕ್ಷರ ಚೇಂಬರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಈ ಸಂದರ್ಭದಲ್ಲಿ ಮೀನು ಮಾರುಕಟ್ಟೆ ಸ್ಥಳಾಂತರದ ಕುರಿತು ಮಾಹಿತಿ ನೀಡಿದ ಪುರಸಭಾ ಮುಖ್ಯಾಧಿಕಾರಿ ದೇವರಾಜ್, ಈ ಬಗ್ಗೆ ಅಂತಿಮ ಸೂಚನಾ ಪ್ರಕಟಣೆ ಹೊರಡಿಸಲಾಗಿದ್ದು ಹೊಸದಾಗಿ ನಿರ್ಮಿಸಿದ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಎ. 1 ರಿಂದ ಮೀನು ವ್ಯಾಪಾರಕ್ಕಾಗಿ ತೆರೆದುಕೊಳ್ಳಲಿದ್ದು, ಹಾಲಿ ಇರುವ ಹಳೇ ಮೀನು ಮಾರುಕಟ್ಟೆಯನ್ನು ಮಾರ್ಚ್ 31 ರಿಂದ ಸ್ಥಗಿತಗೊಳಿಸಲಾಗುತ್ತದೆ ಎಂದ ಅವರು, ಹಳೇ ಮಾರುಕಟ್ಟೆಯಲ್ಲಿರುವ ಮೀನು ವ್ಯಾಪಾರಸ್ಥರು ತಮ್ಮ ತಮ್ಮ ಇತರೇ ಸಾಮಾಗ್ರಿಗಳನ್ನು ಖುಲ್ಲಾಪಡಿಸಿ ಹೊಸದಾಗಿ ನಿರ್ಮಿಸಿದ ಆಸ್ಪತ್ರೆ ರಸ್ತೆಯಲ್ಲಿರುವ ಸುಸಜ್ಜಿತ ಮೀನು ಮಾರುಕಟ್ಟೆಗೆ ಸ್ಥಳಾಂತರಗೊಂಡು ತಮ್ಮ ತಮ್ಮ ವ್ಯಾಪಾರ ವಹಿವಾಟು ನಡೆಸಿಕೊಂಡು ಬರಲು ಅಂತಿಮ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಖೈಸರ್ ಮೊಹತೆಶಮ್ ಉಪಸ್ಥಿತರಿದ್ದರು.