ಚಾರ್ಮಾಡಿ: ಕೊಟ್ಟಿಗೆ ಬೆಂಕಿಗಾಹುತಿ: ದಾಸ್ತಾನಿದ್ದ ತೆಂಗಿನಕಾಯಿ, ರಬ್ಬರ್ ಶೀಟ್ ಭಸ್ಮ
Update: 2021-03-24 15:14 IST
ಬೆಳ್ತಂಗಡಿ, ಮಾ.24: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗರಿ ಸಂಜೀವ ಯಾನೆ ವೆಂಕಪ್ಪ ಗೌಡ ಎಂಬವರಿಗೆ ಸೇರಿದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ, ಬೈಹುಲ್ಲು, ರಬ್ಬರ್ ಶೀಟ್ ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಮಾ.23 ರಂದು ರಾತ್ರಿ ನಡೆದಿದೆ.
ಮನೆಯವರು ಮಲಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಉರಿಯುವ ಸದ್ದು ಕೇಳಿ ಹೊರಗೆ ಓಡಿಬಂದು ನೋಡಿದಾಗ ಕೊಟ್ಟ್ಟಿಗೆಯನ್ನು ಬೆಂಕಿ ಆವರಿಸಿಕೊಂಡಿತ್ತು. ಅಲ್ಲಿ ದಾಸ್ತಾನಿರಿಸಿದ್ದ 3 ಸಾವಿರ ಒಣ ತೆಂಗಿನಕಾಯಿಗಳು, ಮಾರಾಟಕ್ಕೆಂದು ಸಿದ್ಧಪಡಿಸಿದ ರಬ್ಬರ್ ಶೀಟ್, ಹಾಗೂ ಬೈಹುಲ್ಲಿಗೆ ಬೆಂಕಿ ತಗಲಿ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಸುಮಾರು 5 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಬೆಳ್ತಂಗಡಿ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.