×
Ad

ಮಾ.26ರಂದು ಬಿ.ಸಿ.ರೋಡಿನಲ್ಲಿ ಜಿಲ್ಲಾ ಮಟ್ಟದ ರೈತರ ಪ್ರತಿಭಟನೆ, ಹೆದ್ದಾರಿ ಬಂದ್ : ರವಿಕಿರಣ್ ಪುಣಚ

Update: 2021-03-24 17:34 IST

ಬಂಟ್ವಾಳ, ಮಾ.24: ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆಗಳನ್ನು ವಿರೋಧಿಸಿ ಮಾ.26ರಂದು ಬಿ.ಸಿ. ರೋಡಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದರು. 

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಹೋರಾಟ ಮಾ.26ಕ್ಕೆ ನಾಲ್ಕು ತಿಂಗಳು ಪೂರೈಸುತ್ತಿದೆ. ಆ ದಿನ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು ಇದರ ಪ್ರಯುಕ್ತ ದಕ್ಷಿಣ ಕನ್ನಡ ರೈತ, ದಲಿತ, ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟದಿಂದ ಬಿ.ಸಿ. ರೋಡಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದರು.

ಬಿ.ಸಿ.ರೋಡಿನ ಮೇಲ್ಸೇತುವೆಯ ಕೆಳ ಭಾಗದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಸಭೆ ನಡೆಯಲಿದ್ದು ಈ ವೇಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಪ್ರತಿಭಟನಾ ಸಭೆ ಮತ್ತು ಹೆದ್ದಾರಿ ಬಂದ್ ಚಳವಳಿಯಲ್ಲಿ ಭಾಗವಹಿಸಿ ರೈತರ ಬೆಂಬಲಕ್ಕೆ ನಿಲ್ಲಬೇಕಾಗಿ ಅವರು ಮನವಿ ಮಾಡಿದರು.

ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿರುವುದನ್ನು ಅವರು ಇದೇ ಸಂದರ್ಭದಲ್ಲಿ ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಯಾದವ ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News