ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣವಾಗಲಿ: ವನಿತಾ ಗುರುದತ್
ಉಡುಪಿ, ಮಾ.24: ಕ್ಷಯ ರೋಗದ ಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷವಹಿಸದೆ ಕೂಡಲೇ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ವೈದ್ಯಕೀಯ ಅಧಿಕಾರಿ ಡಾ. ವನಿತಾ ಗುರುದತ್ ಹೇಳಿದ್ದಾರೆ.
ಬುಧವಾರ ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಧನ್ವಂತರಿ ನರ್ಸಿಂಗ್ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರದಲ್ಲಿ ವಿಶ್ವ ಕ್ಷಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷಯ ರೋಗವನ್ನು ಆರಂಭದಲ್ಲೇ ಗುರುತಿಸುವುದರೊಂದಿಗೆ ಸಮರ್ಪಕ ಹಾಗೂ ನಿರಂತರ ವೈದ್ಯಕೀಯ ಚಿಕಿತ್ಸೆ ಯನ್ನು ಪಡೆದರೆ ಈ ರೋಗದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದ ಅವರು, ಎಲ್ಲಾ ಸರಕಾರಿ ಆಸ್ಪತ್ರೆ ಗಳಲ್ಲಿ ಈ ರೋಗಕ್ಕೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.
ಸಾಮಾನ್ಯವಾಗಿ ಕ್ಷಯರೋಗದಿಂದ ಬಳಲುತ್ತಿರುವ ವ್ಯಕ್ತಿ ಕೆಮ್ಮಿದಾಗ, ಉಗುಳಿದಾಗ ಹೊರಬರುವ ಸೂಕ್ಮ್ಷ ದ್ರವಗಳ ತುಂತುರುಗಳ ಮೂಲಕ ವೈರಸ್ ಇತರ ವ್ಯಕ್ತಿಗಳ ದೇಹ ಸೇರಿದಾಗ ಅಂತಹ ವ್ಯಕ್ತಿಗಳು ಕ್ಷಯ ರೋಗಕ್ಕೆ ತುತ್ತಾಗುತ್ತಾರೆ ಎಂದರು. ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾ.24ರಂದು ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕ್ಷಯ ರೋಗವು ಟ್ಯುಬರ್‌ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯದಿಂದ ಹರಡುತ್ತದೆ ಎಂದರು.
ಎರಡು ವಾರಗಳ ಕಾಲ ನಿರಂತರ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ರಾತ್ರಿ ವೇಳೆ ಬೆವರುವುದು ಕ್ಷಯ ರೋಗದ ಲಕ್ಷಣಗಳಾಗಿವೆ ಎಂದ ಅವರು, ಈ ಲಕ್ಷಣ ಕಂಡ ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಕೊಳ್ಳಬೇಕು ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದು ಮಾತನಾಡಿ, ಪುರಾತನ ಕಾಲ ದಿಂದಲೂ ಪ್ರಚಲಿತದಲ್ಲಿರುವ ಕಾಯಿಲೆ ಎಂದರೆ ಟಿಬಿ. ಆ ಕಾಲದಲ್ಲಿ ಮನೆಯಲ್ಲೇ ಹಳ್ಳಿ ಮದ್ದನ್ನು ಮಾಡುತ್ತಿದ್ದರು. ಆದರೆ ಈಗ ತಂತ್ರಜ್ಞಾನ ಮುಂದುವರಿದಿದ್ದು, ತಕ್ಷಣದಲ್ಲೇ ಚಿಕಿತ್ಸೆ ದೊರೆಯುತ್ತದೆ. ಈ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ಡಾ. ಅರವಿಂದ್ ನಾಯಕ್ ಅಮ್ಮುಂಜೆ, ಧನ್ವಂತರಿ ನರ್ಸಿಂಗ್ ಕಾಲೇಜಿನ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ವೈ ಜಿ ಸ್ವಾಗತಿಸಿ, ಧನ್ವಂತರಿ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಶಿವಪ್ರಸಾದ್ ವಂದಿಸಿದರು. ರೆಡ್‌ಕ್ರಾಸ್‌ನ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.