ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿ ಡಿಎಚ್‌ಎಫ್‌ಎಲ್ ನಿರ್ದೇಶಕರಿಂದ ಕೋಟ್ಯಂತರ ರೂ. ವಂಚನೆ: ಸಿಬಿಐ
ಹೊಸದಿಲ್ಲಿ,ಮಾ.23: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಗೆ ಸಂಬಂಧಿಸಿದ ಹಗರಣವೊಂದನ್ನು ಬುಧವಾರ ಬಹಿರಂಗಗೊಳಿಸಿರುವ ಸಿಬಿಐ ಸಂಕಷ್ಟದಲ್ಲಿರುವ ದೀವಾನ್ ಹೌಸಿಂಗ್ ಫೈನಾನ್ಸ್ ಲಿ. (ಡಿಎಚ್ಎಫ್ಎಲ್)ನ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ಸೋದರರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಇಬ್ಬರೂ ವಂಚನೆ ಮತ್ತು ಅಕ್ರಮ ಹಣ ವಹಿವಾಟು ಆರೋಪಗಳಲ್ಲಿ ಜೈಲಿನಲ್ಲಿದ್ದಾರೆ.
ವಾಧ್ವಾನ್ ಸೋದರರು 14,000 ಕೋ.ರೂ.ಗೂ ಅಧಿಕ ಮೊತ್ತದ ನಕಲಿ ಗೃಹಸಾಲ ಖಾತೆಗಳನ್ನು ಸೃಷ್ಟಿಸಿದ್ದರು ಮತ್ತು ಭಾರತ ಸರಕಾರದ ಪಿಎಂಎವೈ ಯೋಜನೆಯಿಂದ ಬಡ್ಡಿ ಸಬ್ಸಿಡಿ ರೂಪದಲ್ಲಿ 1,800 ಕೋ.ರೂ.ಗಳನ್ನು ಪಡೆದುಕೊಂಡಿದ್ದರು ಎಂದು ಸಿಬಿಐ ಹೇಳಿದೆ.
2015,ಅಕ್ಟೋಬರ್ನಲ್ಲಿ ಆರಂಭಗೊಂಡಿದ್ದ ಪಿಎಂಎವೈ ಯೋಜನೆಯಡಿ ಆರ್ಥಿವಾಗಿ ದುರ್ಬಲ ವರ್ಗಗಳು ಮತ್ತು ಕೆಳ ಹಾಗೂ ಮಧ್ಯಮ ಆದಾಯ ಗುಂಪುಗಳಿಗೆ ಸೇರಿದವರಿಗೆ ಮಂಜೂರಾದ ಗೃಹಸಾಲಗಳು ಬಡ್ಡಿ ಸಬ್ಸಿಡಿ ಪಡೆಯಲು ಅರ್ಹವಾಗಿವೆ. ಈ ಸಾಲಗಳನ್ನು ಮಂಜೂರು ಮಾಡುವ ಡಿಎಚ್ಎಫ್ಎಲ್ನಂತಹ ಹಣಕಾಸು ಸಂಸ್ಥೆಗಳು ಈ ಸಬ್ಸಿಡಿ ಹಣವನ್ನು ಪಡೆದುಕೊಂಡು ಸಾಲದ ಖಾತೆಗಳಿಗೆ ಜಮೆ ಮಾಡಬೇಕಾಗುತ್ತದೆ.
ಪಿಎಂಎವೈ ಅಡಿ ತಾನು 88,651 ಸಾಲಗಳನ್ನು ಮಂಜೂರು ಮಾಡಿದ್ದು,ಸಬ್ಸಿಡಿ ರೂಪದಲ್ಲಿ 539.40 ಕೋ.ರೂ.ಗಳನ್ನು ಸ್ವೀಕರಿಸಿದ್ದೇನೆ ಮತ್ತು 1,347.80 ಕೋ.ರೂ.ಗಳು ಬಾಕಿಯಿವೆ ಎಂದು ಡಿಎಚ್ಎಫ್ಎಲ್ 2018,ಡಿಸೆಂಬರ್ನಲ್ಲಿ ಹೂಡಿಕೆದಾರರಿಗೆ ತಿಳಿಸಿತ್ತು.
ಆದರೆ ವಾಧ್ವಾನ್ ಸೋದರರು ಡಿಎಚ್ಎಫ್ಎಲ್ನ ಕಪೋಲಕಲ್ಪಿತ ಬಾಂದ್ರಾ ಶಾಖೆಯಲ್ಲಿ 2.6 ಲಕ್ಷ ನಕಲಿ ಗೃಹಸಾಲ ಖಾತೆಗಳನ್ನು ಆರಂಭಿಸಿದ್ದರು ಮತ್ತು ಈ ಪೈಕಿ ಹೆಚ್ಚಿನವು ಪಿಎಂಎವೈ ಯೋಜನೆಯಡಿ ಮಂಜೂರಾಗಿದ್ದವು ಮತ್ತು ನಿಯಮಗಳ ಪ್ರಕಾರ ಸಬ್ಸಿಡಿಯನ್ನು ಪಡೆದುಕೊಂಡಿದ್ದರು ಎನ್ನುವುದನ್ನು ಫಾರೆನ್ಸಿಕ್ ಆಡಿಟ್ ವರದಿಯು ಬಹಿರಂಗಗೊಳಿಸಿದೆ ಎಂದು ಸಿಬಿಐ ತಿಳಿಸಿದೆ.
2007 ಮತ್ತು 2019ರ ನಡುವೆ ಈ ಖಾತೆಗಳಿಗೆ ಒಟ್ಟು 14,046 ಕೋ.ರೂ.ಗಳ ಸಾಲಗಳನ್ನು ಮಂಜೂರು ಮಾಡಲಾಗಿತ್ತು ಮತ್ತು ಈ ಪೈಕಿ 11,755.79 ಕೋ.ರೂ.ಗಳನ್ನು ಇತರ ನಕಲಿ ಕಂಪನಿಗಳಿಗೆ ಸಾಗಿಸಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.
2018 ಎಪ್ರಿಲ್-ಜೂನ್ ನಡುವೆ ಡಿಎಚ್ಎಫ್ಎಲ್ನ ಅಲ್ಪಾವಧಿಯ ಡಿಬೆಂಚರ್ಗಳಲ್ಲಿ 3,700 ಕೋ.ರೂ.ಬ್ಯಾಂಕಿನ ಹಣವನ್ನು ಹೂಡಿಕೆ ಮಾಡಲು ಯೆಸ್ ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್ ಕುಟುಂಬವು 600 ಕೋ.ರೂ.ಗಳ ಕಮಿಷನ್ ಪಡೆದುಕೊಂಡಿದ್ದು ಬೆಳಕಿಗೆ ಬಂದ ನಂತರ ಕಳೆದ ವರ್ಷದ ಜೂನ್ ನಲ್ಲಿ ಸಿಬಿಐ ವಾಧ್ವಾನ್ ಸೋದರರು ಮತ್ತು ಕಪೂರ್ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿತ್ತು. ಕಳೆದ ವರ್ಷದ ಮಾರ್ಚ್ ನಲ್ಲಿ ಕಪೂರ್ ಮತ್ತು ಎಪ್ರಿಲ್‌ನಲ್ಲಿ ವಾಧ್ವಾನ್ ಸೋದರರ ಬಂಧನವಾಗಿತ್ತು.