ಬಾಟಲಿಯಿಂದ ಹಲ್ಲೆ, ಜೀವ ಬೆದರಿಕೆ: ದೂರು ದಾಖಲು
Update: 2021-03-24 21:29 IST
ಮಂಗಳೂರು, ಮಾ. 24: ಕುಂಜತ್ತಬೈಲ್ ಜ್ಯೋತಿನಗರದ ಪ್ರದೀಪ್ ಎಂ. ಅವರಿಗೆ ವ್ಯಕ್ತಿಯೋರ್ವ ಬಾಟಲಿ ಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ಪ್ರದೀಪ್ ಎಂಬವರು ಮಂಗಳವಾರ ಬೆಳಗ್ಗೆ ತನ್ನ ಮನೆಯಿಂದ ರಸ್ತೆಗೆ ಬಂದಾಗ ಅಲ್ಲಿದ್ದ ಪರಿಚಯದ ಸುರೇಶ್ ಅವರನ್ನು ನೋಡಿ ಮಾತನಾಡಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ವ್ಯಕ್ತಿ ಬಾಟಲಿಯಿಂದ ಪ್ರದೀಪ್ ಅವರ ಹೊಟ್ಟೆ ಮತ್ತು ತಲೆಯ ಹಿಂಭಾಗಕ್ಕೆ ಚುಚ್ಚಿ ಗಾಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ಆರೋಪಿಯು ‘ನಿನ್ನನ್ನು ಬದುಕಲು ಬಿಡುವುದಿಲ್ಲ’ ಎಂದು ಜೀವಬೆದರಿಕೆ ಹಾಕಿದ್ದಾನೆ. ಈ ವೇಳೆ ಪ್ರದೀಪ್ ಅವರ ಬಾವ ಬಂದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸುರೇಶ್‌ನೊಂದಿಗೆ ಮಾತನಾಡಿದ ಕಾರಣಕ್ಕೆ ಆರೋಪಿ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.