3 ಐಪಿಎಸ್ ಅಧಿಕಾರಿಗಳನ್ನು ಅವಧಿಗೆ ಮುನ್ನ ನಿವೃತ್ತಿಗೊಳಿಸಿದ ಕೇಂದ್ರ ಸರಕಾರ

Update: 2021-03-24 16:27 GMT

ಲಕ್ನೊ, ಮಾ.24: ಉತ್ತರಪ್ರದೇಶ ಪದವೃಂದದ 3 ಐಪಿಎಸ್ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿ ಮುಂದುವರಿಯಲು ಅಸಮರ್ಥರು ಎಂದು ಕಂಡುಬಂದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಅವರನ್ನು ಅವಧಿಗೂ ಮುನ್ನ ಸೇವೆಯಿಂದ ನಿವೃತ್ತಿಗೊಳಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರ ಸಚಿವಾಲಯ ಬುಧವಾರ ಹೇಳಿದೆ.

ಉತ್ತರಪ್ರದೇಶ ಆಡಳಿತದ ಕೋರಿಕೆಯಂತೆ, ಅಖಿಲ ಭಾರತ ಸೇವಾ ಕಾಯ್ದೆ 1958ರ ನಿಯಮ 16(3)ರಡಿ 3 ಅಧಿಕಾರಿಗಳನ್ನು ಅವಧಿಗೂ ಮುನ್ನ ಕಡ್ಡಾಯ ನಿವೃತ್ತಿಯಾಗಲು ಸೂಚಿಸಲಾಗಿದೆ ಎಂದು ಮಾರ್ಚ್ 17ರ ಆದೇಶ ತಿಳಿಸಿದೆ.

ಈ ಹಿಂದಿನ ಸೇವಾ ದಾಖಲೆಗಳ ಕೂಲಂಕುಷ ಪರಿಶೀಲನೆಯ ಬಳಿಕ ಅಮಿತಾಬ್ ಠಾಕೂರ್ (1933ರ ಬ್ಯಾಚ್ ಇನ್‌ಸ್ಪೆಕ್ಟರ್ ಜನರಲ್), ರಾಜೇಶ್‌ಕೃಷ್ಣ (2002 ಬ್ಯಾಚ್ ಡಿಐಜಿ) ಮತ್ತು ರಾಕೇಶ್ ಶಂಕರ್(2005 ಬ್ಯಾಚ್ ಎಸ್‌ಪಿ)ರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಠಾಕೂರ್ 2028ರಲ್ಲಿ, ಕೃಷ್ಣ 2023ರಲ್ಲಿ ಮತ್ತು ಶಂಕರ್ 2024ರಲ್ಲಿ ನಿವೃತ್ತರಾಗಬೇಕಿತ್ತು. ಅವಧಿಪೂರ್ವ ನಿವೃತ್ತಿಗೊಳಿಸುವಂತೆ ರಾಜ್ಯ ಸರಕಾರ ಮಾಡಿಕೊಂಡಿದ್ದ ಕೋರಿಕೆಯನ್ನು ಗೃಹ ಸಚಿವಾಲಯ ಅನುಮೋದಿಸಿದೆ. ಈ ಅಧಿಕಾರಿಗಳ ವಿರುದ್ಧ ಹಲವಾರು ದೂರುಗಳು ಕೇಳಿಬಂದಿದ್ದು ಶಿಸ್ತುಕ್ರಮ ಕೂಡಾ ಜರಗಿಸಲಾಗಿದೆ. ಇಲಾಖಾ ತನಿಖೆಯ ವರದಿಯನ್ನೂ ಗಮನಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News