ಸಹೋದರರ ಜಗಳ ಬಿಡಿಸಲು ಹೋದ ಪಿಎಸ್‌ಐ ಗುಂಡೇಟಿಗೆ ಬಲಿ

Update: 2021-03-25 04:34 GMT

ಆಗ್ರಾ : ಇಬ್ಬರು ಸಹೋದರರ ನಡುವಿನ ವ್ಯಾಜ್ಯದಲ್ಲಿ ಮಧ್ಯಸ್ಥಿಕೆ ವಹಿಸಲು ತೆರಳಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರನ್ನು ಇಬ್ಬರು ಸಹೋದರರ ಪೈಕಿ ಒಬ್ಬ ಗುಂಡಿಟ್ಟು ಸಾಯಿಸಿದ ಘಟನೆ ಬುಧವಾರ ವರದಿಯಾಗಿದೆ.

ಪೊಲೀಸರ ತಂಡವನ್ನು ನೋಡಿದಾಗ ಒಬ್ಬ ವ್ಯಕ್ತಿ ಓಡಲಾರಂಭಿಸಿದ. ಪೊಲೀಸರು ಆತನನ್ನು ಬೆನ್ನಟ್ಟಿದಾಗ, ನಾಡ ಪಿಸ್ತೂಲಿನಿಂದ ಪೊಲೀಸರತ್ತ ಆತ ಗುಂಡು ಹಾರಿಸಿದ. ಇನ್‌ಸ್ಪೆಕ್ಟರ್ ಪ್ರಶಾಂತ್ ಯಾದವ್ ತೀವ್ರ ಗಾಯಗೊಂಡು ಬಳಿಕ ಮೃತಪಟ್ಟರು ಎಂದು ಅಧಿಕೃತ ಮೂಲಗಳು ಹೇಳಿವೆ.

ಖತೂಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಲೂಗಡ್ಡೆ ಕೊಯ್ಲು ವಿಚಾರದಲ್ಲಿ ಸಹೋದರರಾದ ವಿಶ್ವನಾಥ್ ಹಾಗೂ ಶಿವನಾಥ್ ವ್ಯಾಜ್ಯ ಹೊಂದಿದ್ದರು. ವಿಶ್ವನಾಥ್ ತನಗೆ ಬೆದರಿಕೆ ಒಡ್ಡಿದ್ದಾನೆ ಎಂದು ಆಪಾದಿಸಿ ಶಿವನಾಥ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪಿಎಸ್‌ಐ ಪ್ರಶಾಂತ್ ಯಾದವ್ ಪೊಲೀಸರ ಜತೆಗೆ ಸ್ಥಳಕ್ಕೆ ತೆರಳಿದ್ದರು ಎಂದು ಆಗ್ರಾ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ವಿವರಿಸಿದ್ದಾರೆ.

"ಪೊಲೀಸರನ್ನು ನೋಡಿದ ತಕ್ಷಣ ವಿಶ್ವನಾಥ್ ಓಡಲು ಆರಂಭಿಸಿದ. ಪೊಲೀಸರು ಆತನ ಬೆನ್ನಟ್ಟಿದಾಗ, ಆತ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಅದು ಸಬ್ ಇನ್‌ಸ್ಪೆಕ್ಟರ್ ಅವರಿಗೆ ತಗುಲಿತು" ಎಂದು ಹೇಳಿದರು.

ಘಟನೆ ಬಗ್ಗೆ ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್, ಮೃತ ಪಿಎಸ್‌ಐ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮತ್ತು ಅವರ ಅವಲಂಬಿತರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಆ ರಸ್ತೆಗೆ ಪ್ರಶಾಂತ್ ಹೆಸರಿಡಲಾಗುವುದು ಎಂದು ಅವರು ಹೇಳಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News