ರೈಲ್ವೆ ಪ್ಲಾಟ್‍ ಫಾರ್ಮ್ ನಲ್ಲೇ ರಾತ್ರಿ ಕಳೆದ ಚೆನ್ನೈಗೆ ಬಂದಿಳಿದ ಕ್ರೀಡಾಳುಗಳು

Update: 2021-03-25 09:19 GMT
ಸಾಂದರ್ಭಿಕ ಚಿತ್ರ

ಚೆನ್ನೈ: ಬುಧವಾರ ಆರಂಭಗೊಂಡಿರುವ ಹತ್ತೊಂಬತ್ತನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಸ್ಪರ್ಧೆಗಳು ನಿಗದಿತ ಚೆನ್ನೈಯಲ್ಲಿ ನಡೆಯುವ ಬದಲು ಬೆಂಗಳೂರಿನಲ್ಲಿ ನಡೆಯಲಿದೆ ಎಂಬ ಮಾಹಿತಿ ಮಂಗಳವಾರ ಸಂಜೆಯಷ್ಟೇ ತಿಳಿದು ಬಂದ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಥ್ಲೀಟ್‌ ಗಳು ಚೆನ್ನೈಯಲ್ಲಿ ಮಂಗಳವಾರ ರಾತ್ರಿ ರೈಲ್ವೆ ಪ್ಲಾಟ್‍ ಫಾರ್ಮ್‍ನಲ್ಲೇ ಮಲಗುವಂತಾಯಿತೆಂದು ತಿಳಿದು ಬಂದಿದೆ. ಸಂಘಟಕರು ಸ್ಥಳ ಬದಲಾವಣೆ ಕುರಿತು ಮಾಹಿತಿ ನೀಡುವಾಗ ಹಲವರು ಅದಾಗಲೇ ದೂರದೂರುಗಳಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದರಿಂದ ಅನಿವಾರ್ಯವಾಗಿ ಚೆನ್ನೈ ನಿಲ್ದಾಣದಲ್ಲಿಯೇ ರಾತ್ರಿ ಕಳೆಯುವಂತಾಗಿದೆ.

ಹೆಚ್ಚಿನವರು ಬಡವರಾಗಿದ್ದರಿಮದ ಹಾಗೂ ಅವರ ಕೈಯ್ಯಲ್ಲಿ ಹೆಚ್ಚು ಹಣವಿಲ್ಲದೇ ಇದ್ದುದರಿಂದ ಅವರೆಲ್ಲರೂ ಪ್ಲಾಟ್‍ಫಾರ್ಮ್ ನಲ್ಲಿಯೇ ರಾತ್ರಿ ಕಳೆದಿದ್ದರು. ಚೆನ್ನೈ ರೈಲ್ವೆ ನಿಲ್ದಾಣದಲ್ಲಿ  ಅಂಗವಿಕಲರಿಗೆಂದು  ಹೆಚ್ಚಿನ ಸೌಲಭ್ಯವಿಲ್ಲದೇ ಇರುವುದು ಗಮನಾರ್ಹ.

ಈ ಸ್ಪರ್ಧೆಯಲ್ಲಿನ ನಿರ್ವಹಣೆಯನ್ನು ಅವಲಂಬಿಸಿ ಕ್ರೀಡಾಳುಗಳನ್ನು ಟೋಕಿಯೋ ಪ್ಯಾರಾ ಒಲಿಂಪಿಕ್ಸ್ 2021ಗೆ ಆರಿಸಲಾಗುವುದರಿಂದ ಹಾಗೂ ಇಲ್ಲಿ ವಿಜೇತರಾದವರಿಗೆ  ಪ್ರಶಸ್ತಿ ಹಾಗೂ ವಿದ್ಯಾರ್ಥಿವೇತನ ಅವರವರ ರಾಜ್ಯಗಳಲ್ಲಿ ಕೂಡ ದೊರೆಯುವುದರಿಂದ ಮತ್ತು ಸರಕಾರಿ ನೌಕರಿಗಳಿಗೆ ಅರ್ಜಿ ಸಲ್ಲಿಸುವಾಗ ಆದ್ಯತೆ ದೊರೆಯುವುದರಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಹಲವರು ಆಸಕ್ತಿ ವಹಿಸಿದ್ದಾರೆ.

ಗಾಲಿ ಕುರ್ಚಿಗಳು ಹಾಗೂ ಇತರ ಸಹಾಯಕ ಸಾಧನಗಳೊಂದಿಗೆ ರೈಲು ನಿಲ್ದಾಣದಲ್ಲಿ ಬಂದಿಳಿದ ಭಿನ್ನ ಸಾಮರ್ಥ್ಯದ ಪುರುಷ ಹಾಗೂ ಮಹಿಳಾ ಕ್ರೀಡಾಳುಗಳನ್ನು ಎದುರುಗೊಳ್ಳಲು ಪ್ಯಾರಾ ಒಲಿಂಪಿಕ್ಸ್ ಸಮಿತಿಯ ಯಾರು ಕೂಡಾ ಹಾಜರಿರಲಿಲ್ಲದೇ ಇದ್ದುದು ಬಹಳಷ್ಟು ಸಮಸ್ಯೆಗೆ ಕಾರಣವಾಯಿತು.

"ತಮಿಳುನಾಡು ಸರಕಾರ ಅನುಮತಿ ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಸ್ಥಳ ಬದಲಾವಣೆ ಮಾಡಬೇಕಾಯಿತು, ಮಾರ್ಚ್ 31ರೊಳಗೆ ಸ್ಪರ್ಧೆ ನಡೆಸದೇ ಇದ್ದರೆ ಅದಕ್ಕೆ ಒದಗಿಸಲಾಗುವ ಅನುದಾನ ಕೂಡ ವಾಪಸ್ ಆಗಲಿದೆ" ಎಂದು ಪ್ಯಾರಾ ಒಲಿಂಪಿಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರುಶರಣ್ ಸಿಂಗ್ ಹೇಳಿದರಲ್ಲದೆ ಚೆನ್ನೈಯಿಂದ ಬೆಂಗಳೂರಿಗೆ ತಲುಪಿದ ಸ್ಪರ್ಧಾಳುಗಳು ಪ್ರಯಾಣ ಟಿಕೆಟ್‍ಗಳನ್ನು ಹಾಜರುಪಡಿಸಿದಲ್ಲಿ  ಪ್ರಯಾಣ ವೆಚ್ಚ ನೀಡಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News