ಸಾಲಿಗ್ರಾಮ ಪ.ಪಂಚಾಯತ್: ನಳ್ಳಿ ನೀರಿನ ಶುಲ್ಕ ಪಾವತಿಗೆ ಸೂಚನೆ
ಉಡುಪಿ, ಮಾ. 25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಳ್ಳಿ ನೀರಿನ ಸಂಪರ್ಕ ಪಡೆದಿರುವ ಖಾತೆದಾರರು/ ಅನುಬೋಗದಾರರು, ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಉಂಟಾಗಿರುವ ಕಾರಣ ಪ್ರತಿದಿನ ನೀರು ಸರಬರಾಜು ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ಎಲ್ಲಾ ವಾರ್ಡ್‌ಗಳಿಗೂ ಎರಡು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.
ಆದುದರಿಂದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಅಲ್ಲದೇ ಅನಧಿಕೃತ ವಾಗಿ ನಳ್ಳಿ ನೀರಿನ ಸಂಪರ್ಕವನ್ನು ಪಡೆದುಕೊಂಡ ಖಾತೆದಾರರು/ ಅನುಬೋಗದಾರರು ಪಟ್ಟಣ ಪಂಚಾಯತ್ ಕಚೇರಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿ, ದಂಡ ಶುಲ್ಕ ಪಾವತಿಸಿ ಅಕ್ರಮ ಸಂಪರ್ಕ ವನ್ನು ಸಕ್ರಮಗೊಳಿಸಿಕೊಳ್ಳಬೇಕು ಹಾಗೂ ಮಾರ್ಚ್ ತಿಂಗಳವರೆಗೆ ಬಾಕಿ ಇರುವ ನಳ್ಳಿ ನೀರಿನ ಶುಲ್ಕವನ್ನು ಮಾ.31ರೊಳಗೆ ಪಾವತಿಸಬೇಕು.
ಪಟ್ಟಣ ಪಂಚಾಯತ್ ವತಿಯಿಂದ ಕುಡಿಯುವ ಸಲುವಾಗಿ ನೀರನ್ನು ಸರಬರಾಜು ಮಾಡುತ್ತಿದ್ದು, ಕೆಲವು ಸಾರ್ವಜನಿಕರು ಅನಧಿಕೃತವಾಗಿ ಮೋಟಾರ್ ಪಂಪ್ ಅಳವಡಿಸಿರುವುದು, ಕೃಷಿ ಉದ್ದೇಶಕ್ಕೆ ನೀರನ್ನು ಬಳಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ.
ತಪ್ಪಿದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಪಂಪು ವಶಪಡಿಸಿಕೊಂಡು ದಂಡ ವಿಧಿಸಿ ಅನಧಿಕೃತ ಸಂಪರ್ಕವನ್ನು ಕಡಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.