ಕಪಿಲಾ ಗೋಶಾಲೆ ಧ್ವಂಸದ ಹಿಂದೆ ಪಿತೂರಿ: ದಿನಕರ ಶೆಟ್ಟಿ
ಮಂಗಳೂರು, ಮಾ. 25: ಕಪಿಲಾ ಗೋಶಾಲೆಯನ್ನು ಜಿಲ್ಲಾಡಳಿತದ ಮೂಲಕ ಧ್ವಂಸ ಮಾಡಿರುವುದು ದೊಡ್ಡ ಪಿತೂರಿಯಾಗಿದ್ದು, ಯಾರದ್ದೋ ಲಾಭಕ್ಕಾಗಿ 300 ಗೋವುಗಳನ್ನು ಬೀದಿಗೆ ಹಾಕಲಾಗಿದೆ ಎಂದು ಆರ್ಯ ಸಮಾಜದ ಅಧ್ಯಕ್ಷ ದಿನಕರ ಶೆಟ್ಟಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತೋಕೂರು ಗ್ರಾಮದಲ್ಲಿ ಸುಮೇಧಾ ಫೌಂಡೇಶನ್‌ಗೆ 49 ಎಕರೆ ಗೋಮಾಳ ಜಾಗವನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಕಪಿಲಾ ಗೋಶಾಲೆಯನ್ನು ಒಡೆಯಲಾಗಿದೆ ಎಂದರು.
ಕಪಿಲಾ ಗೋಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿಯವರಿಗೆ ಸುಮಾರು 10 ತಿಂಗಳ ಹಿಂದೆ ಸುಮೇಧಾ ಫೌಂಡೇಶನ್‌ನ ಪ್ರಕಾಶ್ (ಇಬ್ಬರ ಹೆಸರೂ ಒಂದೇ ಆಗಿರುವುದನ್ನು ದುರುಪಯೋಗಪಡಿಸಲಾಗಿದೆ) ಎಂಬವರು ಕರೆ ಮಾಡಿ ಕಪಿಲಾ ಗೋಶಾಲೆಯ ಗೋಮೂತ್ರ ಹಾಗೂ ಸಗಣಿ ಬೇಕೆಂದು ಹೇಳಿದ್ದರು. ನಂತರ ಆರು ಜನರನ್ನು ಕಪಿಲಾ ಗೋಶಾಲೆಗೆ ಕಳುಹಿಸಿ ನಾವೇ ಗೋಶಾಲೆಯನ್ನು ನಡೆಸುವುದಾಗಿಯೂ ಮಾಸಿಕ 35,000 ರೂ. ನೀಡುವುದಾಗಿಯೂ ಹೇಳಿದ್ದರು. ಅವರು ಕಪಿಲಾ ಗೋಶಾಲೆಯ ಫೋಟೋ ಹಾಕಿ ಸರಕಾರದಿಂದ ಅನುದಾನ ಪಡೆಯಲು ಅರ್ಜಿ ಹಾಕಿರುವುದು ಸಹಾಯಕ ಆಯುಕ್ತರ ಪತ್ರದ ಮೂಲಕ ನಮಗೆ ತಿಳಿದು ಬಂದಿದೆ ಎಂದು ದಿನಕರ ಶೆಟ್ಟಿ ಆರೋಪಿಸಿದರು.
ಕಪಿಲಾ ಗೋಶಾಲೆ ಒಡೆದು ಗೋವುಗಳನ್ನು ಬೀದಿಗೆ ಹಾಕಿರುವುದರ ವಿರುದ್ಧ ನ್ಯಾಯಕ್ಕಾಗಿ ವಂದೇ ಮಾತರಂ ಗೋಸಂರಕ್ಷಣಾ ಸಮಿತಿ ವತಿಯಿಂದ ಎಪ್ರಿಲ್ 4ರಂದು ಕಟೀಲು ಕ್ಷೇತ್ರಕ್ಕೆ ಕೆಂಜಾರು ಗೋಶಾಲೆಯಿಂದ ಪಾದಯಾತ್ರೆ ಮಾಡಿ ಪ್ರಾರ್ಥನೆ ಸಲ್ಲಿಸಲಾಗುವುದು. ಇದೇ ವೇಳೆ ತಾತ್ಕಾಲಿಕವಾಗಿ ಕಪಿಲಾ ಗೋಶಾಲೆ ರಚನೆಗೆ ಭೂಮಿ ಪೂಜೆ ನೆರವೇರಿಸಲಾಗುವುದು. ದಾನಿಗಳು ಸ್ವಯಂ ಪ್ರೇರಿತರಾಗಿ ದಾನ ಮಾಡಬಹುದು (ಬ್ಯಾಂಕ್ ಖಾತೆ ನಂ. 5942201000029, ಐಎಫ್‌ಎಸ್‌ಸಿ ಕೋಡ್ CNRB0005942) ಎಂದು ಕಪಿಲಾ ಗೋಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರು ಸ್ಪಷ್ಟನೆ ನೀಡಲಿ
ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಇದೀಗ 300ರಷ್ಟು ಗೋವುಗಳನ್ನು ಬೀದಿಪಾಲು ಮಾಡಿರುವ ಪ್ರಸಕ್ತ ಜಿಲ್ಲೆಯ ಸಂಸದರು, ಶಾಸಕರು ವೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷರು ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಶೆಟ್ಟಿಯವರಿಗೆ 4 ಲಕ್ಷ ರೂ. ನೀಡಿರುವುದಾಗಿ ಹೇಳಿರುತ್ತಾರೆ. ಆ ಹಣ ಎಲ್ಲಿಗೆ, ಯಾರಿಗೆ ಹೋಗಿದೆ ಎಂಬ ಬಗ್ಗೆ ಅವರು ಸಾರ್ವಜನಿಕವಾಗಿ ಸ್ಪಷ್ಟನೆ ಹಾಗೂ ದಾಖಲೆಯನ್ನು ಒದಗಿಸಬೇಕು ಎಂದು ದಿನಕರ ಶೆಟ್ಟಿ ಆಗ್ರಹಿಸಿದರು.
ರಾಜಕೀಯಕ್ಕಾಗಿ ಹಿಂದುತ್ವವನ್ನು ಕಳೆದುಕೊಳ್ಳದಿರಿ
ಕಪಿಲಾ ಗೋಶಾಲೆಯ ಧ್ವಂಸ ಷಡ್ಯಂತ್ರವಾಗಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಅದರ ಮುಖ್ಯಸ್ಥರ ತೇಜೋವಧೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ರಾಜಕೀಯಕ್ಕಾಗಿ ಹಿಂದುತ್ವವನ್ನು ಕಳೆದುಕೊಳ್ಳುವ ಕೆಲಸವನ್ನು ಯಾರೂ ಮಾಡ ಬಾರದು. ಇದೀಗ ಮಾಡಿರುವ ತಪ್ಪಿಗೆ ಪ್ರಾಯಶ್ಚಿತವಾಗಿ ಗೋಶಾಲೆ ಕಟ್ಟಿಕೊಡಲಿ. ಮಾಜಿ ಶಾಸಕರೊಬ್ಬರು ನೀಡಿರುವ ದೇಣಿಗೆಯ ಬಗ್ಗೆಯೂ ಅಪಪ್ರಚಾರ ಮಾಡಲಾಗುತ್ತಿದೆ. ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಬಿಲ್ಲವ ಸಂಘಟನೆಗಳು ಸೇರಿದಂತೆ ದೈವ ದೇವಸ್ಥಾನಗಳಿಗೆ ತಮ್ಮ ವೈಯಕ್ತಿಕ ನೆಲೆಯಲ್ಲಿಯೂ ಲಕ್ಷಾಂತರ ಹಣವನ್ನು ನೀಡಿದ್ದಾರೆ. ಇದೀಗ ಅವರು ಪ್ರಾಣಿಪ್ರಿಯನಾಗಿ ಓರ್ವ ಮಾಜಿ ಶಾಸಕನ ನೆಲೆಯಲ್ಲಿ ಕನಿಕರದಿಂದ ದೇಣಿಗೆ ನೀಡಿದ್ದಾರೆ. ಗೋವುಗಳ ಆಶ್ರಯ ತಾಣವನ್ನು ಒಡೆದಿರುವುದರಿಂದ ಇದೀಗ ಅವುಗಳು ಬಿಸಿಲಿನಲ್ಲಿರಬೇಕಾದ ಪರಿಸ್ಥಿತಿ. ಬಿಸಿಲಿನ ತಾಪಕ್ಕೆ ಈಗಾಗಲೇ ಒಂದು ಗೋವು ಪ್ರಾಣ ಕಳೆದುಕೊಂಡಿದೆ ಎಂದು ದಿನಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.