ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದ ಶ್ರೇಯಸ್ ಅಯ್ಯರ್
ಪುಣೆ, ಮಾ.25: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಭುಜನೋವಿಗೆ ಗುರಿಯಾಗಿದ್ದ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ಸಂಪೂರ್ಣ ಐಪಿಎಲ್ ಟೂರ್ನಿಯಿಂದಲೂ ದೂರ ಉಳಿಯುವ ಸಾಧ್ಯತೆಯಿದೆ.
ಇದೀಗ ತೀವ್ರವಾದ ಭುಜನೋವಿನಿಂದ ಬಳಲುತ್ತಿರುವ ಅಯ್ಯರ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಜ್ಜಾಗಿದ್ದಾರೆ. ಹೀಗಾಗಿ ಅವರು 4 ತಿಂಗಳು ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
ಅಯ್ಯರ್ ಇಂಗ್ಲೀಷ್ ಕೌಂಟಿ ತಂಡ ಲಂಕಾಶೈರ್ ಪರವಾಗಿ ಏಕದಿನ ಟೂರ್ನಮೆಂಟ್‌ನಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಜುಲೈ 23ರಿಂದ ಆರಂಭವಾಗಲಿರುವ ಟೂರ್ನಮೆಂಟ್‌ಗೆ ಅಯ್ಯರ್‌ರೊಂದಿಗೆ ಸಹಿ ಹಾಕಿದ್ದಾಗಿ ಲಂಕಾಶೈರ್ ಸೋಮವಾರ ಘೋಷಿಸಿತ್ತು.
26ರ ಹರೆಯದ ಅಯ್ಯರ್ ಇಂಗ್ಲೆಂಡ್ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಜಾನಿ ಬೈರ್‌ಸ್ಟೋವ್ ಬ್ಯಾಟ್ ನಿಂದ ಚಿಮ್ಮಿದ ಚೆಂಡನ್ನು ತಡೆಯುವ ಪ್ರಯತ್ನದಲ್ಲಿದ್ದಾಗ ಗಾಯಗೊಂಡಿದ್ದರು.
ಎಪ್ರಿಲ್ 9ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಬೇಕಾಗಿತ್ತು. ಅಯ್ಯರ್ ಅನುಪಸ್ಥಿತಿಯಲ್ಲಿ ಡೆಲ್ಲಿ ನಾಯಕತ್ವ ಹೊಣೆ ರಿಷಭ್ ಪಂತ್, ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಅಥವಾ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಹಸ್ತಾಂತರವಾಗುವ ಸಾಧ್ಯತೆಯಿದೆ.