ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಎಂಎಂ ಖುರೈಶಿ ನಿಧನ
ಮಂಗಳೂರು, ಮಾ.25: ಹಿರಿಯ ಚಿಂತಕ, ಉದ್ಯಮಿ, ಸಮಾಜ ಸೇವಕ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಸ್ಥಾಪಕಾಧ್ಯಕ್ಷ ಎಂಎಂ ಖುರೈಶಿ (93)ಹೃದಯಾಘಾತದಿಂದ ಬೆಂಗಳೂರಿನ ಸ್ವಗೃಹದಲ್ಲಿ ಗುರುವಾರ ನಿಧನರಾಗಿದ್ದಾರೆ.
ಮೃತರು ನಾಲ್ಕು ಮಂದಿ ಪುತ್ರರು ಮತ್ತು ಆರು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
1928ರ ನವೆಂಬರ್ 14ರಂದು ಕುಂದಾಪುರದಲ್ಲಿ ಜನಿಸಿದ ಎಂಎಂ ಖುರೈಶಿ (ಮನಖಂಡಿ ಮೂಸಾ ಖುರೈಶಿ) ಮುಂಬೈ ವಿವಿಯಿಂದ ಎಂಎ (ಅರ್ಥಶಾಸ್ತ್ರ) ವ್ಯಾಸಂಗ ಮಾಡಿದ್ದರು. ಬಳಿಕ ಯೆನೆಪೊಯ ಗ್ರೂಪ್‌ನಲ್ಲಿ ವ್ಯವಸ್ಥಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಎಂಎಂ ಖುರೈಶಿ ತದನಂತರ ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿದ್ದರು. ಬೀರೂರಿನಲ್ಲಿ ಟಿಂಬರ್ ಮರ್ಚಂಟ್ ಆಗಿ, ಬೆಂಗಳೂರಿನಲ್ಲಿ ಜಲ್ಲಿ ಕ್ರಶರ್ ಉದ್ಯಮಿಯಾಗಿ, ಕುಂದಾಪುರದಲ್ಲಿ ಮತ್ಸೋದ್ಯಮದಲ್ಲಿ ಅಂದರೆ ಮೀನಿನ ಉತ್ಪನ್ನ, ಮೀನಿನ ಆಹಾರ ತಯಾರಿ, ಮೀನಿನ ರಸಗೊಬ್ಬರ ತಯಾರಿ ಉದ್ಯಮದಲ್ಲೂ ಯಶಸ್ಸು ಸಾಧಿಸಿದ್ದರು.
ಉದ್ಯಮಿಯಾಗಿದ್ದರೂ ಸಾಮಾಜಿಕ ಕಳಕಳಿಯಿತ್ತು. ಉತ್ತಮ ಬರೆಹಗಾರರಾಗಿದ್ದರು. ಅದಲ್ಲದೆ ದಲಿತ ಮತ್ತು ಅಲ್ಪಸಂಖ್ಯಾತರ ಚಳುವಳಿಯಲ್ಲೂ ಸಕ್ರಿಯರಾಗಿದ್ದರು. ಅವರ ಹಲವು ಲೇಖನಗಳು ದಲಿತ್ಸ್ ವಾಯ್ಸ್ ಪತ್ರಿಕೆಯಲ್ಲಿ ನಿರಂತರವಾಗಿ ಪ್ರಕಟವಾಗುತ್ತಿತ್ತು.
ಈ ಮಧ್ಯೆ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಮುಖ ಬ್ಯಾರಿ ಮುಸ್ಲಿಮರು ಸಂಘಟನೆಗೆ ಚಾಲನೆ ಕೊಡುವ ಸಿದ್ಧತೆಯಲ್ಲಿದ್ದರು. ಆವಾಗ ಸಂಘಟನೆ ಕಟ್ಟಲು ಮುಂಚೂಣಿ ಸ್ಥಾನದಲ್ಲಿ ನಿಂತಿದ್ದ ಎಂಎಂ ಖುರೈಶಿ ‘ದಿ ಬ್ಯಾರೀಸ್ ವೆಲ್ಫೇರ್ ಅಸೋಶಿಯೇಶನ್’ನ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಸಂಘಟನೆಯ ಶ್ರೇಯಾಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದರು. ಬೆಂಗಳೂರು ಸಹಿತ ನಾಡಿನ ಅನೇಕ ಸಂಘಸಂಸ್ಥೆಗಳಿಗೆ ಅವರು ಮಾರ್ಗದರ್ಶಕರಾಗಿದ್ದರು. ಉದ್ಯಮ ಕ್ಷೇತ್ರದಿಂದ ನಿವೃತ್ತಿ ಪಡೆದ ಬಳಿಕ ಬ್ರಹ್ಮಾವರದಲ್ಲಿ ಕೆಲವು ವರ್ಷ ಇದ್ದ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು.
ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಸ್ಥಾಪನೆಯ ಕ್ರಾಂತಿಕಾರಿ ಹೆಜ್ಜೆಯ ಮೂಲಕ ಸಮುದಾಯದ ಅಭಿವೃದ್ಧಿಯ ಮುನ್ನುಡಿ ಬರೆದ ಎಂಎಂ ಖುರೈಶಿ ಅವರ ನಿಧನ ಇಡೀ ಸಮುದಾಯದ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಅವರ ದೂರದೃಷ್ಟಿ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಬ್ಯಾರಿಗಳು ಎಂದು ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಸ್ಥಾಪನೆಯ ದೂರದೃಷ್ಟಿಯ ಹೆಜ್ಜೆಯಿಟ್ಟು ಎಂಎಂ ಖುರೈಶಿ ಅವರಿಗೆ ಇಡೀ ಸಮುದಾಯ ಕೃತಜ್ಞವಾಗುವುದು ಎಂದು ಟೀಕೆಸ್ ಗ್ರೂಪ್ ಅಧ್ಯಕ್ಷ ಉಮರ್ ಟೀಕೆ ಸಂತಾಪ ಸೂಚಿಸಿದ್ದಾರೆ.