ದ.ಕ.: ಪೂರ್ವ ಮುಂಗಾರು ಮಳೆ ಚುರುಕು ಸಾಧ್ಯತೆ
ಮಂಗಳೂರು, ಮಾ.25: ಮಕರ ಸಂಕ್ರಾತಿಯ ನಂತರ ಉತ್ತರಾರ್ಧಗೋಳದತ್ತ ಸೂರ್ಯನ ಚಲನೆ ಆರಂಭವಾಗುತ್ತಿದ್ದಂತೆಯೇ ದ.ಕ.ಜಿಲ್ಲಾದ್ಯಂತ ಸೆಕೆಯ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಅದರ ಪರಿಣಾಮ ಬುಧವಾರ ರಾತ್ರಿ ಸುಳ್ಯದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಇನ್ನೂ ಒಂದೆರೆಡು ದಿನ ರಾತ್ರಿ ವೇಳೆ ಮಳೆ ಸುರಿಯುವ ಮತ್ತು ಹಗಲಿಡೀ ಸೆಕೆಯ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಹವಾಮಾನ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ಅಂತ್ಯದವರೆಗಿನ ಅವಧಿಯನ್ನು ಪೂರ್ವ ಮುಂಗಾರು ಅವಧಿ ಎನ್ನಲಾಗುತ್ತದೆ. ಪಶ್ಚಿಮ ಮತ್ತು ದಕ್ಷಿಣ ಭಾರತಕ್ಕೆ ಎಪ್ರಿಲ್‌ನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗುವ ಸೆಕೆಯಾದರೆ ಉತ್ತರ ಭಾರತಕ್ಕೆ ಮೇ ಹೆಚ್ಚು ತಾಪಮಾನ ದಾಖಲಾಗುವ ತಿಂಗಳಾಗಿವೆ. ತಾಪಮಾನ ಹೆಚ್ಚಳವಾಗುವುದರೊಂದಿಗೆ ಮಾರ್ಚ್-ಎಪ್ರಿಲ್‌ನಲ್ಲಿ ಪೂರ್ವ ಮುಂಗಾರು ತನ್ನ ಚಟುವಟಿಕೆ ಆರಂಭಿಸುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಮಧ್ಯಭಾರತದಲ್ಲಿ ದಿನದ ತಾಪಮಾನ 40 ಡಿಗ್ರಿಯ ಆಸುಪಾಸಿನಲ್ಲಿದ್ದರೆ, ಕರಾವಳಿಯಲ್ಲೂ 36 ಡಿಗ್ರಿವರೆಗೆ ಉಷ್ಣಾಂಶ ದಾಖಲಾಗುತ್ತಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಳದಿಂದ ಸಮುದ್ರದಲ್ಲಿ ನೀರು ಆವಿಯಾಗಿ ದಟ್ಟ ಮೋಡಗಳ ರಚನೆಗೆ ಕಾರಣ ವಾಗುತ್ತದೆ. ಗಾಳಿಯಿಂದಾಗಿ ಇದು ಎಲ್ಲೆಡೆ ಚಲಿಸಿ ಮಳೆ ಸುರಿಯುತ್ತದೆ. ಸಾಮಾನ್ಯವಾಗಿ ಪೂರ್ವ ಮುಂಗಾರಿನಲ್ಲಿ ಗುಡುಗು-ಮಿಂಚು ಅಬ್ಬರ ಹೆಚ್ಚಿರುತ್ತದೆ. ಕೇರಳ, ತಮಿಳುನಾಡು, ದಕ್ಷಿಣ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಪೂರ್ವ ಮುಂಗಾರು ಚಟುವಟಿಕೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿಯ ಹಲವೆಡೆ ರಾತ್ರಿಯಿಂದ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ. ಪೂರ್ವಮುಂಗಾರಿನಲ್ಲಿ ಮುಖ್ಯವಾಗಿ ಘಟ್ಟದ ತಪ್ಪಲಿನ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಮುಂದಿನ ದಿನಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ.
ದ.ಕ. ಜಿಲ್ಲೆಯಲ್ಲಿ ಈ ಬಾರಿ ವರ್ಷಾರಂಭದಲ್ಲಿ ಉತ್ತಮ ಮಳೆಯಾಗಿದೆ. ಜನವರಿಯಲ್ಲಿ ಸರಾಸರಿ 4 ಮಿ.ಮೀ. ಮಳೆ ಸುರಿಯ ಬೇಕಾದಲ್ಲಿ 118 ಮಿ.ಮೀ. ಮಳೆಯಾಗಿದೆ. ಫೆಬ್ರವರಿಯಲ್ಲಿ 2 ಮಿ.ಮೀ ಸರಾಸರಿಯ ಬದಲು 13 ಮಿ.ಮೀ. ಮಳೆಯಾಗಿದೆ. ಈವರೆಗೆ ತಲಾ 131 ಮತ್ತು 118 ಮಿ.ಮೀ ಮಳೆ ಸುರಿದಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿ ತಿಳಿಸಿದೆ.
ಮಾರ್ಚ್‌ನಿಂದ ಮೇವರೆಗೆ ಸುರಿಯುವ ಮಳೆಯನ್ನು ಪೂರ್ವಮುಂಗಾರು ಮಳೆ ಎಂದು ಗುರುತಿಸಲಾಗುತ್ತದೆ. ಕರಾವಳಿ ತೀರದಲ್ಲಿ ಈ ಅವಧಿಯಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.
- ಸುನೀಲ್ ಗಾವಸ್ಕರ್
ಕೆಎಸ್‌ಎನ್‌ಡಿಎಂಸಿ ಹವಾಮಾನ ತಜ್ಞ