ಜನಸಾಮಾನ್ಯರ ಸಂಕಷ್ಟಗಳಿಗೆ ಪ್ರಧಾನಿ ದಿವ್ಯ ಮೌನ: ಸೊರಕೆ

Update: 2021-03-25 14:53 GMT

ಪೆರ್ಡೂರು, ಮಾ. 25: ತೈಲ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆಗೆ ಯಾವುದೇ ಸ್ಪಂದನೆ ತೋರದ ಕೇಂದ್ರ ಸರಕಾರ, ಇತ್ತೀಚೆಗೆ ಜಾರಿಗೆ ತಂದ ಗುಜರಿ ವಾಹನ ನೀತಿ ವಾಹನ ಕಂಪೆನಿಗಳಿಗೆ ಲಾಭ ಮಾಡುವ ಉದ್ದೇಶವನ್ನು ಹೊಂದಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲೂ ಸ್ಪಂದಿಸದ ಪ್ರಧಾನಿ ನರೇಂದ್ರ ಮೋದಿ ದಿವ್ಯ ಮೌನ ವಹಿಸಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.

ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ (ಹಿರಿಯಡ್ಕ) ವತಿಯಿಂದ ಕೇಂದ್ರ, ರಾಜ್ಯ ಸರಕಾರಗಳ ಆಡಳಿತ ವೈಲ್ಯ, ಜನ ವಿರೋಧಿ ನೀತಿ, ಬೆಲೆ ಏರಿಕೆ ವಿರೋಧಿಸಿ, ಜನಜಾಗೃತಿ ಮೂಡಿಸಲು ಗುರುವಾರ ಪೆರ್ಡೂರಿನಿಂದ ಪರ್ಕಳದ 80ಬಡಗಬೆಟ್ಟಿನವರೆಗೆ ಆಯೋಜಿಸಿದ 16ಕಿ.ಮೀ.ಉದ್ದದ ‘ಜನಧ್ವನಿ’ ಪಾದಯಾತ್ರೆಗೆ ಪೆರ್ಡೂರಿನಲ್ಲಿ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಗಣ್ಯರು, ಕ್ರಿಕೆಟ್ ಮತ್ತು ಸಿನಿಮಾ ತಾರೆಯರ ಯಾವುದೇ ವಿಷಯವಿದ್ದರೂ, ಅವರು ಕ್ರೀಡೆಯಲ್ಲಿ ಗೆದ್ದರೆ, ಗಾಯಾಳುಗಳಾದರೆ, ವಿಶೇಷ ಸಾಧನೆ ಮಾಡಿದರೆ ತಕ್ಷಣವೇ ಟ್ವೀಟ್ ಮೂಲಕ ಅಭಿನಂದಿಸುವ, ಸಾಂತ್ವನ ಹೇಳುವ ಪ್ರಧಾನಿ ಮೋದಿ, ಜನ ಸಾಮಾನ್ಯರ ಸಮಸ್ಯೆಗಳನ್ನು ಬಗ್ಗೆ ಸಂಪೂರ್ಣ ನಿರ್ಲಕ್ಷ ತೋರುತಿದ್ದಾರೆ. ಅವರು ಶ್ರೀಮಂತರ ಪರವಾಗಿದ್ದಾರೆ. ಕೃಷಿ ಕಾಯಿದೆಗಳಿಗೆ ತಿದ್ದುಪಡಿ ಮೂಲಕ ಸ್ವಾಭಿಮಾನಿ ರೈತರ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದರು.

ಕೇಂದ್ರ, ರಾಜ್ಯ ಬಿಜೆಪಿ ಆಡಳಿತದಿಂದ ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯ ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮನೆ ಬಾಗಿಲಿಗೆ ಮರಳು ಒದಗಿಸುತ್ತೇವೆ ಎಂದವರ ಆಡಳಿತದಲ್ಲಿ, ಮೊದಲು ಟನ್‌ಗೆ 8,000ರೂ.ಗೆ ಸಿಗುತ್ತಿದ್ದ ಮರಳು ಈಗ 15,000 ರೂ. ಕೊಟ್ಟರೂ ಸಿಗುತ್ತಿಲ್ಲ ಎಂದರು.

ಸಂಕಷ್ಟದಲ್ಲಿರುವ ಸುರೇಶ್ ಪ್ರಭು ಗುಂಡ್ಯಡ್ಕ, ವಿಠಲ ಪೂಜಾರಿ, ಬಚ್ಚ ಶೆಟ್ಟಿ ಅವರ ನೆರವಿಗಾಗಿ ಕಾಂಗ್ರೆಸ್ ವತಿಯಿಂದ ನಿಧಿ ಸಂಗ್ರಹಕ್ಕೆ ಮೊದಲ ದೇಣಿಗೆಯನ್ನು ವಿನಯ ಕುಮಾರ್ ಸೊರಕೆ ನೀಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪಾದಯಾತ್ರೆಗೆ ಧ್ವಜ ನಿಶಾನೆ ತೋರಿದರು. ಪಾದಯಾತ್ರೆಯ ದಾರಿಯುದ್ದಕ್ಕೂ ಚೆಂಡೆ ತಾಳದ ನಾದ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಧಿಕ್ಕಾರದ ನಾನಾ ಘೋಷಣೆಗಳು ಜನರ ಗಮನ ಸೆಳೆದವು.

ಪಾದಯಾತ್ರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗೂರ್, ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಉಡುಪಿ ತಾಪಂ ಸದಸ್ಯೆ ಡಾ. ಸುನೀತಾ ಶೆಟ್ಟಿ, ಕೀರ್ತಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಯತೀಶ್ ಕರ್ಕೇರ, ಶಶಿಧರ ಶೆಟ್ಟಿ ಎಲ್ಲೂರು, ಅಲೆವೂರು ಹರೀಶ್ ಕಿಣಿ, ಕಾಪು ಬ್ಲಾಕ್ ಕಾಂಗ್ರೆಸ್(ಉತ್ತರ ವಲಯ) ಅಧ್ಯಕ್ಷ ಪ್ರವೀಣ್ ಶೆಟ್ಟಿ, ಶಾಂತಾರಾಮ ಸೂಡ, ನವೀನ್‌ಚಂದ್ರ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು, ಉದ್ಯಾವರ ನಾಗೇಶ್ ಕುಮಾರ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಸಾಲ್ಯಾನ್ , ರೋಶನಿ ಒಲಿವೆರಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಮುಂತಾದವರು ಪಾಲ್ಗೊಂಡಿದ್ದರು.

ಪಾದಯಾತ್ರೆ ಇಂದು ಸಂಜೆ 80 ಬಡಗುಬೆಟ್ಟಿನಲ್ಲಿ ಮುಕ್ತಾಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News