×
Ad

ಉಡುಪಿ ಜಿಲ್ಲೆಗೆ 10,117 ಕೋಟಿ ರೂ.ಗಳ ಸಾಲ ಯೋಜನೆ ಬಿಡುಗಡೆ

Update: 2021-03-25 20:26 IST

ಉಡುಪಿ, ಮಾ.25: ಉಡುಪಿ ಜಿಲ್ಲೆಗೆ 2021-22ನೇ ಸಾಲಿಗೆ ತಯಾರಿಸಿದ ಒಟ್ಟು 10,117 ಕೋಟಿ ರೂ.ಗಳ ಸಾಲ ಯೋಜನೆ ಯನ್ನು (ಡಿಸಿಪಿ) ಗುರುವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ 2020-21ನೇ ಆರ್ಥಿಕ ವರ್ಷದ ಮೂರನೇ ತ್ರೈ ಮಾಸಿಕದಲ್ಲಿ ಉಡುಪಿ ಜಿಲ್ಲೆಯ ಬ್ಯಾಂಕ್ ವ್ಯವಹಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಡುಪಿ ಜಿಪಂ ಸಿಇಓ ಡಾ.ನವೀನ್ ಭಟ್ ವೈ. ಬಿಡುಗಡೆಗೊಳಿಸಿದರು.

ಇದರಂತೆ ಉಡುಪಿ ಜಿಲ್ಲೆಯ ಆದ್ಯತಾ ಕ್ಷೇತ್ರಕ್ಕೆ ಮುಂದಿನ ಆರ್ಥಿಕ ವರ್ಷದಲ್ಲಿ ಒಟ್ಟು 8,867.28 ಕೋಟಿ ರೂ. ಸಾಲದ ಯೋಜನೆಯನ್ನು ಜಿಲ್ಲೆಯ ಬ್ಯಾಂಕ್‌ಗಳಿಗೆ ನಿಯೋಜಿಸಲಾಗಿದೆ. ಆದ್ಯತೇತರ ಕ್ಷೇತ್ರಕ್ಕೆ ಈ ಮೊತ್ತ 1250 ಕೋಟಿ ರೂ.ಗಳಾಗಿದೆ. ಈ ಮೂಲಕ ಮುಂದಿನ ಆರ್ಥಿಕ ವರ್ಷಕ್ಕೆ ಒಟ್ಟು 10,117.28 ಕೋಟಿ ರೂ.ಗಳ ಸಾಲ ಯೋಜನೆಯನ್ನು ರೂಪಿಸಲಾಗಿದೆ.

ಇದರಲ್ಲಿ ಬೆಳೆ ಉತ್ಪನ್ನ, ಮಾರುಕಟ್ಟೆ, ಕೃಷಿ ಸಾಲ ಹಾಗೂ ಕೃಷಿ ಸಂಬಂಧಿ ಯೋಜನೆಗಳಿಗೆ ಒಟ್ಟು 2,139.87 ಕೋಟಿ ರೂ., ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ 286.28 ಕೋಟಿ ರೂ. ಹಾಗೂ ಕೃಷಿಗೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಿಗೆ 2350.68 ಕೋಟಿ ರೂ. ಸೇರಿದಂತೆ ಒಟ್ಟು ಕೃಷಿ ಕ್ಷೇತ್ರಕ್ಕೆ 4,776.83 ಕೋಟಿ ರೂ. ಮೀಸಲಿರಿಸಲಾಗಿದೆ. ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ 2,643.37 ಕೋಟಿ ರೂ.ಗಳ ಸಾಲದ ಗುರಿಯನ್ನು ನೀಡಲಾಗಿದೆ.

ಇನ್ನು ರಫ್ತು ಸಾಲ 255 ಕೋಟಿ ರೂ., ಶೈಕ್ಷಣಿಕ ಸಾಲ 162 ಕೋಟಿ ರೂ., ಗೃಹ ಸಾಲ 930 ಕೋಟಿ ರೂ., ನವೀಕರಿಸಬಹು ದಾದ ಇಂಧನಕ್ಕೆ 40.08 ಕೋಟಿ ರೂ. ಸೇರಿದಂತೆ ಒಟ್ಟು 8867.28 ಕೋಟಿ ರೂ.ಗಳ ಗುರಿಯನ್ನು ಆದ್ಯತಾ ಕ್ಷೇತ್ರಕ್ಕೆ ನೀಡಲು ಯೋಜನೆ ರೂಪಿಸಲಾಗಿದೆ.

ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ಠೇವಣಿ ಮೊತ್ತವು 2020ರ ಡಿಸೆಂಬರ್ ಅಂತ್ಯದ ವೇಳೆಗೆ 28,042 ಕೋಟಿರೂ.ಗೆ ಏರಿಕೆ ಯಾಗಿದ್ದು, ಶೇ.12.02ರ ಪ್ರಗತಿ ದಾಖಲಿಸಲಾಗಿದೆ. ಅದೇ ರೀತಿ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್‌ಗಳು ಒಟ್ಟು 13,018 ಕೋಟಿ ರೂ. ಸಾಲ ನೀಡಿದ್ದು, ಇದರ ವಾರ್ಷಿಕ ಪ್ರಗತಿ ಶೇ.7.14 ಆಗಿದೆ. ಇದರಿಂದ ಕಳೆದ ಅವಧಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿಯ ಅನುಪಾತ ಶೇ.46.42ಕ್ಕೆ ಏರಿಕೆಯಾಗಿದೆ ಎಂದು ಉಡುಪಿ ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಮ್ಯಾನೇಜರ್ ಲೀನಾ ಪೀಟರ್ ಪಿಂಟೋ ತಿಳಿಸಿದರು.

2020-21ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ಈ ಅವಧಿಯ ಒಟ್ಟು ಸಾಲದ ಗುರಿಯಾದ 2406 ಕೋಟಿ ರೂ.ಗಳಲ್ಲಿ 1983 ಕೋಟಿ ರೂ. ಸಾಲವನ್ನು ನೀಡುವ ಮೂಲಕ ಶೇ.82ರಷ್ಟು ಸಾಧನೆ ಮಾಡಿವೆ. ಈ ಸಾಲದಲ್ಲಿ ಕೃಷಿ ಕ್ಷೇತ್ರಗಳಿಗೆ 1010 ಕೋಟಿ ರೂ., ಅತೀ ಸಣ್ಣ, ಕಿರು ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ 621 ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ 28 ಕೋಟಿ ರೂ. ಹಾಗೂ 116 ಕೋಟಿ ರೂ.ಗಳನ್ನು ಗೃಹ ಸಾಲವಾಗಿ ನೀಡಲಾಗಿದೆ. ಈ ಮೂಲಕ ಆದ್ಯತಾ ಕ್ಷೇತ್ರಕ್ಕೆ ಇದ್ದ ಗುರಿಯಾದ 2093 ಕೋಟಿ ರೂ.ಗಳಲ್ಲಿ 1833 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ವಿತರಿಸಲಾಗಿದೆ. ಆದ್ಯತೇತರ ಕ್ಷೇತ್ರದಲ್ಲಿ ಅವಧಿಯ ಗುರಿಯಾದ 313 ಕೋಟಿ ರೂ.ಗಳಲ್ಲಿ 150 ಕೋಟಿ ರೂ.ಗಳ ಸಾಲ ವಿತರಣೆಯಾಗಿದೆ ಎಂದವರು ವಿವರಿಸಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು 83,415 ಫಲಾನುಭವಿಗಳಿಗೆ 3006 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ವರ್ಗದ 36,714 ಫಲಾನುಭವಿಗಳಿಗೆ ಒಟ್ಟು 1375 ಕೋಟಿ ರೂ.ಆರ್ಥಿಕ ಸಹಾಯವನ್ನು ನೀಡಲಾಗಿದೆ. ಅದೇ ರೀತಿ 69,046 ಮಂದಿ ಮಹಿಳೆಯರಿಗೆ ಒಟ್ಟು 2715 ಕೋಟಿ ರೂ.ಗಳ ಸಾಲವನ್ನು ವಿವಿಧ ಉದ್ದೇಶಗಳಿಗಾಗಿ ವಿತರಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ 506 ವಿದ್ಯಾರ್ಥಿಗಳಿಗೆ ವಿದ್ಯಾ ಸಾಲ ಯೋಜನೆಯಡಿ 28 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದರು.

ಲೀಡ್ ಬ್ಯಾಂಕ್ ಮುಖ್ಯಪ್ರಬಂಧಕ ರುದ್ರೇಶ್ ಡಿ.ಸಿ. ಮಾತನಾಡಿ, ಜಿಲ್ಲೆ ಯಲ್ಲಿ ಈ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಜಿಲ್ಲೆಯ 8641 ಮಂದಿ ರೈತ ಖಾತೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 112 ಕೋಟಿ ರೂ. ವಿತರಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಜಿಲ್ಲೆಯಲ್ಲಿ ಬ್ಯಾಂಕ್ ಶಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಾಲ ನೀಡಿಕೆಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳ ಈ ತ್ರೈಮಾಸಿಕ ಅವಧಿಯ ಸಾಧನೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಅಗ್ರಸ್ಥಾನದಲ್ಲಿರುವ ಐದು ಬ್ಯಾಂಕುಗಳ ಸಮಗ್ರ ವರದಿಯನ್ನು ತನಗೆ ನೀಡುವಂತೆ ತಿಳಿಸಿದರು.
  
ಸಾಲಕ್ಕೆ ಆದ್ಯತೆ ನೀಡಿ: ವಿದ್ಯಾರ್ಥಿಗಳಿಗೆ ವಿದ್ಯಾಸಾಲ ಹಾಗೂ ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡುವಲ್ಲಿ ಬ್ಯಾಂಕುಗಳು ತೋರುವ ನಿರಾಸಕ್ತಿಯನ್ನು ಖಂಡಿಸಿ, ನೀವು ಜಿಲ್ಲೆಯ ಜನರಿಗೆ ಸಾಲವನ್ನು ನೀಡದಿದ್ದರೆ, ನಿಮ್ಮ ಬ್ಯಾಂಕು ಖಾತೆಗಳಲ್ಲಿರುವ ಸರಕಾರಿ ಖಾತೆಗಳನ್ನು ರದ್ದುಮಾಡಿಸಿ, ಬೇರೆ ಬ್ಯಾಂಕುಗಳಿಗೆ ವರ್ಗಾಯಿಸಲು ಶಿಫಾರಸ್ಸು ಮಾಡುವುದಾಗಿ ಗಂಭೀರವಾಗಿ ನುಡಿದರು. ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿ ಅನುಪಾತ ಶೇ.60ರಷ್ಟಿರಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿ ಇದು ಕಳೆದ ತ್ರೈಮಾಸಿಕದಲ್ಲಿ ಶೇ.1.37ರಷ್ಟು ಸುಧಾರಿಸಿದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.0.57ರಷ್ಟು ಕುಸಿದಿದೆ. ಬ್ಯಾಂಕುಗಳನ್ನು ಇದನ್ನು ಸುಧಾರಿಸಿಕೊಳ್ಳಲೇ ಬೇಕು ಎಂದು ಡಾ.ಭಟ್ ನುಡಿದರು.

ನಬಾರ್ಡ್‌ನ ಎಜಿಎಂ ಸಂಗೀತಾ ಕರ್ತಾ, ಯೂನಿಯನ್ ಬ್ಯಾಂಕಿನ ಪ್ರಬಂಧಕ ಡಾ.ವಾಸಪ್ಪ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ. ಕಾಳೆ ಹಾಗೂ ವಿವಿಧ ಬ್ಯಾಂಕು ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News