×
Ad

ಉಡುಪಿ : ಎಂಐಟಿಯಲ್ಲಿ ಮತ್ತೆ 111 ಸೇರಿ ಒಟ್ಟು 145 ಮಂದಿಗೆ ಕೊರೋನ ಸೋಂಕು

Update: 2021-03-25 20:38 IST

ಉಡುಪಿ, ಮಾ. 25: ಜಿಲ್ಲೆ ಕೋವಿಡ್ ಎರಡನೇ ಅಲೆಯ ಭೀತಿಯಲ್ಲಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬರುವವರ ಸಂಖ್ಯೆ ಈಗ ಏರುಗತಿಯಲ್ಲಿದೆ. ಗುರುವಾರ ಜಿಲ್ಲೆಯಲ್ಲಿ 145 ಮಂದಿಯನ್ನು ಕೋವಿಡ್‌ಗೆ ಪಾಸಿಟಿವ್ ಆಗಿ ಗುರುತಿಸಲಾಗಿದೆ. ಇವರಲ್ಲಿ 111 ಮಂದಿ ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳೇ ಆಗಿದ್ದಾರೆ. ಈ ಮೂಲಕ ಎಂಐಟಿಯಲ್ಲಿ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 586ಕ್ಕೆ ನೆಗೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಕಳೆದ ಮಾ.15ರಿಂದ ಇಂದಿನವರೆಗೆ ಜಿಲ್ಲೆಯ ಒಟ್ಟು 21,502 ಮಂದಿಯನ್ನು ಕೋವಿಡ್ ಸೋಂಕಿಗಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 3669 ಮಂದಿ ಎಂಐಟಿ ಕ್ಯಾಂಪಸ್‌ನವರೇ ಇದ್ದಾರೆ. ಇವರಲ್ಲಿ 586 ಮಂದಿ ಪಾಸಿಟಿವ್ ಬರುವ ಮೂಲಕ ಎಂಐಟಿಯಲ್ಲಿ ಪಾಸಿಟಿವ್ ಬರುವವರ ಪ್ರಮಾಣ 4.88ರಷ್ಟಿದೆ ಎಂದವರು ಕಳವಳ ವ್ಯಕ್ತಪಡಿಸಿದರು. ಉಳಿದಂತೆ ಬೈಂದೂರಿನಲ್ಲಿ ಇಂದು ಆರು ಮಂದಿ ಪಾಸಿಟಿವ್ ಬಂದಿರುವುದು ಸಹ ಗಂಭೀರ ವಿಷಯವಾಗಿದೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಇಂದು ಒಟ್ಟು 145 ಪ್ರಕರಣಗಳು ಕೋವಿಡ್‌ಗೆ ಪಾಸಿಟಿವ್ ಬಂದಿವೆ. ದಿನದಲ್ಲಿ 18 ಮಂದಿ ರೋಗದಿಂದ ಗುಣಮುಖ ರಾದರೆ, ಸೋಂಕು ಸಕ್ರಿಯವಾಗಿದ್ದು, ಚಿಕಿತ್ಸೆ ಪಡೆಯುವವರ ಸಂಖ್ಯೆ 605ಕ್ಕೆ ನೆಗೆದಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಇದು ಅತ್ಯಧಿಕ ಸಂಖ್ಯೆಯಾಗಿದೆ ಎಂದು ಡಾ. ಸೂಡ ತಿಳಿಸಿದರು.

ಇಂದು ಪಾಸಿಟಿವ್ ಬಂದ 145 ಮಂದಿಯಲ್ಲಿ 81 ಮಂದಿ ಪುರುಷರಾದರೆ, 64 ಮಂದಿ ಮಹಿಳೆಯರು. ಇವರಲ್ಲಿ ಎಂಐಟಿಯ 111 ಮಂದಿ ಸೇರಿ ಒಟ್ಟು 123 ಮಂದಿ ಉಡುಪಿ ತಾಲೂಕಿಗೆ ಸೇರಿದವರಾಗಿದ್ದಾರೆ. ಉಳಿದಂತೆ 16 ಮಂದಿ ಕುಂದಾಪುರ ತಾಲೂಕಿನವರಾದರೆ, ಆರು ಮಂದಿ ಕಾರ್ಕಳ ತಾಲೂಕಿನವರು. ಇಂದು 18 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿ ಕೊಂಡವರ ಸಂಖ್ಯೆ ಈಗ 23,785ಕ್ಕೇರಿದೆ ಎಂದು ಡಾ.ಸೂಡ ವಿವರಿಸಿದರು.

ಬುಧವಾರ ಜಿಲ್ಲೆಯಲ್ಲಿ 2953 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 145 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 24,580 ಆಗಿದೆ ಎಂದು ಡಾ.ಸೂಡ ತಿಳಿಸಿದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,04,913 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ಗೆ ಯಾರೂ ಬಲಿಯಾಗಿಲ್ಲ. ಈವರೆಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 190 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News