×
Ad

ದ.ಕ., ಉಡುಪಿಯಲ್ಲಿ ಜಲ್ಲಿಕಲ್ಲು ಸಾಗಾಟ ನಿರ್ಬಂಧ ತೆರವುಗೊಳಿಸಲು ಒತ್ತಾಯಿಸಿ ಸಚಿವ ಮುರುಗೇಶ್ ನಿರಾಣಿಗೆ ಮನವಿ

Update: 2021-03-25 21:12 IST

ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜಲ್ಲಿಕಲ್ಲು ಹಾಗೂ ಶಿಲೆಕಲ್ಲುಗಳ ಸಾಗಾಟಕ್ಕೆ ನಿರ್ಬಂಧ ಹೇರಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿದ್ದು, ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ರಘುಪತಿ ಭಟ್ ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕ್ವಾರಿ ಮಾಲಕರು, ಕ್ರಷರ್ ಮಾಲಕರು, ಕಟ್ಟಡ‌ ಸಾಮಾಗ್ರಿ, ಲಾರಿ ಟೆಂಪೋ ಮಾಲಕರ ಸಂಘದ ಪದಾಧಿಕಾರಿಗಳ ನಿಯೋಗ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಜಲ್ಲಿಕಲ್ಲು ಸಿಗದೆ ಅನೇಕ ಕಾಮಗಾರಿಗಳು ಸ್ಥಗಿತವಾಗಿವೆ. ಜನ ಸಾಮಾನ್ಯರಿಗೂ ಇದರಿಂದ ಸಮಸ್ಯೆಯಾಗುತ್ತಿದೆ. ಹಾಗಾಗಿ ನಿರ್ಬಂಧ ತೆರವುಗೊಳಿಸುವಂತೆ ನಿಯೋಗವು ಗಣಿ ಹಾಗೂ ಭೂ ವಿಜ್ಞಾನ ಸಚಿವರಿಗೆ ಒತ್ತಾಯಿಸಿತು. ಸಮಸ್ಯೆ ಆಲಿಸಿದ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿಯೋಗದೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿ ಸಮಸ್ಯೆಯ ಕುರಿತು ಗಮನ ಸೆಳೆದರು.

ಸಮಸ್ಯೆಯ ಗಂಭೀರತೆಯನ್ನು ಅರಿತ ಸಿಎಂ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜಲ್ಲಿಕಲ್ಲು ಹಾಗೂ ಶಿಲೆಕಲ್ಲು ಸಾಗಾಟಕ್ಕೆ ಅವಕಾಶ ನೀಡುವ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News