×
Ad

ಸೂರಲ್ಪಾಡಿ ವ್ಯಕ್ತಿಯಿಂದ 16 ಲಕ್ಷ ರೂ. ಸುಲಿಗೆ: ನಾಲ್ವರು ಪೊಲೀಸ್ ವಶ

Update: 2021-03-25 21:53 IST

ಮಂಗಳೂರು, ಮಾ.25: ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ  ಸೂರಲ್ಪಾಡಿಯ ವ್ಯಕ್ತಿಯನ್ನು ಮೂವರು ಅಪರಿಚಿತರು ತಡೆದು, ಸುಮಾರು 16.20ಲಕ್ಷ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಳ್ಳಾಲ ಮಾರ್ಗತಲೆಯ ಮುಹಮ್ಮದ್ ರಿಫಾತ್ (27), ಫೈಸಲ್ ನಗರದ ಅಸ್ಫಾಕ್  (24), ಬಿ.ಸಿ.ರೋಡು ಪರ್ಲಿಯಾದ ಸಾದಿಕ್ (22), ಬಿ.ಸಿ. ರೋಡು ಕೈಕಂಬದ ಮುಹಮ್ಮದ್ ಇಸ್ಮಾಯಿಲ್ (39) ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸೂರಲ್ಪಾಡಿಯ ಅಬ್ದುಲ್ ಸಲಾಂ ಅವರು ತನ್ನ ಅಕ್ಕನ ಮಗಳ ವಿವಾಹಕ್ಕಾಗಿ ಬಟ್ಟೆ ಮತ್ತು ಚಿನ್ನ ಖರೀದಿಸಲು 16,20,000 ರೂ. ನಗದಿನೊಂದಿಗೆ ಆ್ಯಕ್ಟಿವಾ ಹೋಂಡಾದಲ್ಲಿ ಓಲ್ಡ್ ಕೆಂಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ದಾರಿ ಮಧ್ಯೆ ಮೂವರು ಅಪರಿಚಿತರು ತಡೆದು ನಿಲ್ಲಿಸಿದ್ದಾರೆ. ನಂತರ ಸ್ಕೂಟರ್‌ನಿಂದ ಲಕೋಟೆಯೊಂದು ಕೆಳಗೆ ಬಿದ್ದಿದೆ ಎಂದು ಹೇಳಿದ್ದಾರೆ. ಈ ವೇಳೆ ಅಬ್ದುಲ್ ಸಲಾಂ ಸ್ಕೂಟರ್ ನಿಲ್ಲಿಸಿ ಇಳಿದು ರಸ್ತೆಯಲ್ಲಿ ಏನು ಬಿದ್ದಿರ ಬಹುದೆಂದು ಹಿಂದಿರುಗಿ ನೋಡುವಷ್ಟರಲ್ಲಿ ಸ್ಕೂಟರಿನ ಹುಕ್‌ಗೆ ಸಿಕ್ಕಿಸಿದ್ದ ಬ್ಯಾಗ್ ಅನ್ನು ಅಪರಿಚಿತರು ಎತ್ತಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News