×
Ad

ಎಚ್‌ಐವಿ ಕುರಿತು ಜನಸಾಮನ್ಯರಲ್ಲಿ ಅರಿವು ಮೂಡಿಸಿ: ಸಿಇಒ

Update: 2021-03-25 22:15 IST

ಮಂಗಳೂರು, ಮಾ.25: ಸಾರ್ವಜನಿಕರಲ್ಲಿ ಎಚ್‌ಐವಿ/ ಏಡ್ಸ್ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸುವಂತಹ ಕೆಲಸ ಆಗಬೇಕು. ಆಗ ಮಾತ್ರ ಏಡ್ಸ್ ಸೋಂಕಿನಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಜಿಪಂನ ಸಿಇಒ ಡಾ.ಕುಮಾರ್ ಹೇಳಿದರು.

ಅವರು ನಗರದ ಜಿಪಂನ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಎಚ್‌ಐವಿ/ಏಡ್ಸ್ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಚ್‌ಐವಿ ಎನ್ನುವುದು ವೈರಸ್ ಮೂಲಕ ಹರಡುವ ರೋಗವಾಗಿದ್ದು, ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ನಾಶಗೊಳಿಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದರಿಂದ ರೋಗದ ಸ್ಥಿತಿಗತಿ ತಿಳಿಯಲು ಸಾಧ್ಯವಾಗುತ್ತದೆ ಎಂದರು.

ಎಚ್‌ಐವಿ/ಏಡ್ಸ್ ಸೋಂಕಿತರಿಗೆ ಇರುವ ವಿವಿಧ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿ ಪ್ರಯೋಜನ ಪಡೆದುಕೊಳ್ಳುವಂತೆ ಅರಿವು ಮೂಡಿಸಬೇಕು. ಜನರು ಎಚ್‌ಐವಿ/ ಏಡ್ಸ್ ಹರಡುವ ಮಾರ್ಗಗಳನ್ನು ಸರಿಯಾಗಿ ತಿಳಿದುಕೊಂಡರೆ ಈ ರೋಗ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಖಾಸಗಿ ಲ್ಯಾಬ್‌ಗಳು ಎಚ್‌ಐವಿ ಪರೀಕ್ಷೆಯ ವರದಿಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಲ್ಯಾಬ್‌ಗಳಿಂದ ಎಚ್‌ಐವಿ ಪರೀಕ್ಷೆ ನಡೆದ ಬಗ್ಗೆ ಮಾಹಿತಿ ಪಡೆಯುವುದರೊಂದಿಗೆ ಎಷ್ಟು ಸೋಂಕಿತರು ಸರಕಾರದಿಂದ ಯಾವೆಲ್ಲ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದರು.

ಸಭೆಯಲ್ಲಿ ಎಚ್‌ಐವಿ ಸೋಂಕಿತರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾತನಾಡಿದ ಅವರು, ನಿವೇಶನ, ಉಚಿತ ಮನೆ, ಸಾಲ ಸೌಲಭ್ಯ, ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳ ಬಗ್ಗೆಯೂ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಸೋಂಕಿತ ವಲಸೆ ಕಾರ್ಮಿಕರ ಬಗ್ಗೆ ಸರಿಯಾದ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯಾರಿ ಮಾತನಾಡಿ, ಏಡ್ಸ್ ಸೋಂಕಿತರಿಗೆ ಮಾನಸಿಕ, ಆರ್ಥಿಕ ಬೆಂಬಲ ನೀಡುವ ಅಗತ್ಯವಿದೆ. ಇದರಿಂದ ಅವರಿಗೂ ಸಮಾಜದಲ್ಲಿ ಎಲ್ಲರಂತೆ ಸಮಾನತೆ ದೊರಕುತ್ತದೆ. ಇತ್ತೀಚಿನ ದಿನಗಳಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ಯುವ ಜನರಲ್ಲಿ ಎಚ್‌ಐವಿ ಸೋಂಕು ಪ್ರಮಾಣ ಹೆಚ್ಚುತ್ತಿದೆ. ಆದರೆ ನಮ್ಮ ದೇಶದಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು ಒಳ್ಳೆಯ ವಿಚಾರ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News