ವಿದ್ಯಾರ್ಥಿಗೆ ಹಲ್ಲೆ, ಜೀವ ಬೆದರಿಕೆ: ದೂರು ದಾಖಲು
Update: 2021-03-25 22:25 IST
ಮಂಗಳೂರು, ಮಾ.25: ನಗರದ ಮಲ್ಲಿಕಟ್ಟೆ ಸಮೀಪ ಖಾಸಗಿ ಕಾಲೇಜಿನ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ ಘಟನೆ ಬುಧವಾರ ನಡೆದಿದೆ.
ನಗರದ ಖಾಸಗಿ ಕಾಲೇಜಿನ ಪ್ಯಾರಾ ಮೆಡಿಕಲ್ ವ್ಯಾಸಂಗದ ವಿದ್ಯಾರ್ಥಿ ಮುಹಮ್ಮದ್ ಸ್ವಾನ್(22) ಗಾಯಾಳು ಎಂದು ತಿಳಿದುಬಂದಿದೆ.
ಈತ ಬುಧವಾರ ರಾತ್ರಿ 10:30ರ ವೇಳೆ ಮಲ್ಲಿಕಟ್ಟೆ ಸಮೀಪ ತನ್ನ ಬ್ಯಾಚ್‌ಮೇಟ್‌ನಿಂದ ಪುಸ್ತಕವನ್ನು ಪಡೆದುಕೊಂಡು ಬೈಕ್‌ನಲ್ಲಿ ವಾಪಸಾಗುತ್ತಿದ್ದ ಸಂದರ್ಭ ಐವರು ಅಪರಿಚಿತರು ತಡೆದು ನಿಲ್ಲಿಸಿದ್ದಾರೆ. ಬಳಿಕ ಹೆಸರು ಕೇಳಿದ್ದು, ಈ ವೇಳೆ ಅಪರಿಚಿತರು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.