ಜೈಲಿನಲ್ಲಿರುವ ನವಾಲ್ನಿಯ ಆರೋಗ್ಯದ ಬಗ್ಗೆ ಗಂಭೀರ ಕಳವಳ

Update: 2021-03-25 17:55 GMT

ಮಾಸ್ಕೋ (ರಶ್ಯ), ಮಾ. 25: ಜೈಲಿನಲ್ಲಿರುವ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಗೆ ಸಾಧ್ಯವಿರುವಷ್ಟು ಬೇಗ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಐರೋಪ್ಯ ಒಕ್ಕೂಟದ ಸದಸ್ಯರಾದ ಲಿತುವೇನಿಯ, ಲಾತ್ವಿಯ ಮತ್ತು ಎಸ್ಟೋನಿಯ ದೇಶಗಳು ರಶ್ಯವನ್ನು ಒತ್ತಾಯಿಸಿವೆ.

‘‘ನವಾಲ್ನಿಯ ಆರೋಗ್ಯ ಪರಿಸ್ಥಿತಿಯ ಬಗ್ಗೆ ಆಘಾತಕಾರಿ ವರದಿಗಳು ಬಂದಿವೆ. ವೈದ್ಯಕೀಯ ಚಿಕಿತ್ಸೆಯು ರಾಜಕೀಯ ಕೈದಿಗಳ ಮೂಲಭೂತ ಹಕ್ಕಾಗಿದೆ’’ ಎಂದು ಈ ದೇಶಗಳ ವಿದೇಶ ಸಚಿವರು ಟ್ವಿಟರ್‌ನಲ್ಲಿ ಗುರುವಾರ ಹಾಕಿದ ಸಂದೇಶದಲ್ಲಿ ಹೇಳಿದ್ದಾರೆ. ‘‘ಈ ವಿಷಯದ ಬಗ್ಗೆ ಧ್ವನಿಯೆತ್ತುವಂತೆ ನಾವು ಅಂತರ್‌ರಾಷ್ಟ್ರೀಯ ಸಮುದಾಯ ಮತ್ತು ಐರೋಪ್ಯ ಒಕ್ಕೂಟದ ಇತರ ನಾಯಕರನ್ನೂ ಒತ್ತಾಯಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

ನವಾಲ್ನಿಯನ್ನು ನೋಡಲು ಅವರ ವೈದ್ಯರಿಗೆ ಅವಕಾಶ ನಿರಾಕರಿಸಿದ ಬಳಿಕ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ. ಅವರು ಆರೋಗ್ಯವಾಗಿದ್ದಾರೆ ಎನ್ನುವುದನ್ನು ತೋರಿಸುವ ಪುರಾವೆಗಳು ನಮಗೆ ಬೇಕು ಎಂಬುದಾಗಿ ನವಾಲ್ನಿಯ ಮಿತ್ರರು ಹೇಳಿದ ಬಳಿಕ ಈ ಮೂರು ದೇಶಗಳ ವಿದೇಶ ಸಚಿವರು ಈ ಹೇಳಿಕೆ ನೀಡಿದ್ದಾರೆ.

ನವಾಲ್ನಿ ಕಳೆದ ವಾರದಿಂದ ತೀವ್ರ ಬೆನ್ನುನೋವಿಗೆ ಒಳಗಾಗಿದ್ದಾರೆ ಎಂದು ನವಾಲ್ನಿಯ ಲಿತುವೇನಿಯಲ್ಲಿ ನೆಲೆಸಿರುವ ಮಿತ್ರರೊಬ್ಬರು ಹೇಳಿದ್ದಾರೆ. ತನ್ನ ಒಂದು ಕಾಲಿನಲ್ಲಿ ಅವರು ಸ್ಪರ್ಶಜ್ಞಾನವನ್ನು ಕಳೆದುಕೊಂಡಿದ್ದಾರೆ ಹಾಗೂ ಈಗ ಅವರಿಗೆ ಕಾಲಿನ ಮೇಲೆ ನಿಲ್ಲಲು ಆಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News