ಸೂಯೆಝ್: ಹಡಗು ಸಂಚಾರ ಸ್ಥಗಿತ

Update: 2021-03-25 17:56 GMT

ಇಸ್ಲಾಮಿಯ (ಈಜಿಪ್ಟ್), ಮಾ. 25: ಸೂಯೆಝ್ ಕಾಲುವೆಯ ತಳಕ್ಕೆ ತಾಗಿ ನಿಂತಿರುವ 400 ಮೀಟರ್ ಉದ್ದದ ಬೃಹತ್ ಹಡಗನ್ನು ತೆರವುಗೊಳಿಸುವ ಪ್ರಯತ್ನಗಳು ಸಾಗಿರುವಂತೆಯೇ, ಗುರುವಾರ ಈ ಪ್ರಮುಖ ಜಲಮಾರ್ಗದಲ್ಲಿನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಕಾಲುವೆಯಲ್ಲಿ ಬೃಹತ್ ಕಂಟೇನರ್ ಹಡಗು ಅಡ್ಡಕ್ಕೆ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಇತರ ಹಡಗುಗಳ ಸಂಚಾರಕ್ಕೆ ತಡೆಯಾಗಿದೆ. ಹಡಗನ್ನು ನೇರ ಮಾಡಲು 8 ಟಗ್‌ಗಳನ್ನು ನಿಯೋಜಿಸಲಾಗಿದ್ದು, ತೆರವು ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿರಿಸಿದೆ.

‘ಎವರ್ ಗಿವನ್’ ಹಡಗು ಮಂಗಳವಾರ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಕಾಲುವೆಯ ತಳಕ್ಕೆ ತಾಗಿ ಅಡ್ಡಕ್ಕೆ ಸಿಲುಕಿಕೊಂಡಿದೆ.

‘‘ಈ ಹಡಗಿನಿಂದ ಕಂಟೇನರ್‌ಗಳು, ತೈಲ ಮತ್ತು ನೀರನ್ನು ತೆಗೆದು ಅದರ ಭಾರ ಕಡಿಮೆ ಮಾಡಬೇಕಾಗುತ್ತದೆ. ಕಾಲುವೆಯ ಹೂಳೆತ್ತಬೇಕಾಗಿದೆ. ಎಷ್ಟು ಸಮಯ ತಗಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವಾರವೂ ಆದೀತು’’ ಎಂದು ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸುತ್ತಿರುವ ಡಚ್ ಕಂಪೆನಿ ಬೊಸ್ಕಾಲಿಸ್‌ನ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News