"ಜನರು ಏನು ಧರಿಸಬೇಕು, ಏನು ತಿನ್ನಬೇಕೆಂದು ನಿರ್ಧರಿಸುವ ಹಕ್ಕು ರಾಜಕಾರಣಿಗಳಿಗಿಲ್ಲ:"

Update: 2021-03-26 07:33 GMT

ಹೊಸದಿಲ್ಲಿ: ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ತಿರಥ್‌ ಸಿಂಗ್‌ ರಾವತ್‌, ಯುವತಿಯರು ಹರಿದ ಜೀನ್ಸ್‌ ಪ್ಯಾಂಟ್‌ ಗಳನ್ನು ಧರಿಸಿಕೊಂಡು ಮೊಣಕಾಲು ತೋರಿಸುವ ಮೂಲಕ ನಮ್ಮ ಸಂಪ್ರದಾಯಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ತಮ್ಮದೇ ಪಕ್ಷದ ಮುಖಂಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, "ರಾಜಕಾರಣಿಗಳಿಗೆ ಜನರ ವಸ್ತ್ರಧಾರಣೆಯ, ಆಹಾರದ ಕುರಿತು ಮಾತನಾಡುವ ಹಕ್ಕಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

"ಮಹಿಳೆಗೆ ಅವಳು ಸಮಾಜದಲ್ಲಿ ಹೇಗೆ ಜೀವಿಸಬೇಕು ಎಂದು ಆಯ್ಕೆ ಮಾಡುವ ಹಕ್ಕಿದೆ. ಸಮಾಜದೊಂದಿಗೆ ತೊಡಗಿಸಿಕೊಳ್ಳಲು ಅವಳು ಬಯಸುವ ಮಾರ್ಗವನ್ನು ಆರಿಸಿಕೊಳ್ಳುವುದು ಅವಳ ಹಕ್ಕಾಗಿದೆ ಎಂದು ಟೈಮ್ಸ್ ನೆಟ್ ವರ್ಕ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಹೇಳಿಕೆ ನೀಡಿದರು.

"ಮಹಿಳೆಯಾಗಿರಲಿ, ಪುರುಷನಾಗಿರಲಿ, ತೃತೀಯ ಲಿಂಗಿಯೇ ಆಗಿರಲಿ, ಅವರು ಹೇಗೆ ವಸ್ತ್ರಧಾರಣೆ ಮಾಡಬೇಕು, ಅವರೇನು ತಿನ್ನಬೇಕು, ಅವರೇನು ಮಾಡುತ್ತಾರೆ ಎಂಬುವುದರ ಬಗ್ಗೆ ನಿರ್ಧರಿಸುವ ಹಕ್ಕು ಯಾವುದೇ ರಾಜಕಾರಣಿಗಿಲ್ಲ. ಏಕೆಂದರೆ ಅಂತಿಮವಾಗಿ ನಮ್ಮ ಸೇವೆಯು ನೀತಿ ನಿರೂಪಣೆ ಮತ್ತು ಕಾನೂನಿನ ನಿಯಮವನ್ನು ಖಾತರಿಪಡಿಸುತ್ತದೆ" ಎಂದು ಹೇಳಿಕೆ ನೀಡಿದ್ದಾರೆ.

ತನ್ನ ಪಕ್ಷದ ಸಹೋದ್ಯೋಗಿ ರಾವತ್ ರವರ ಮಾತುಗಳ ಕುರಿತು ತಾವೇಕೆ ಟೀಕೆ ವ್ಯಕ್ತಪಡಿಸಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಪ್ರಬುದ್ಧವಾದ ಚಿಂತನಾಶಕ್ತಿ ಹೊಂದಿರುವ ಯಾರೂ ಆ ಹೇಳಿಕೆಯನ್ನು ನೀಡುವುದಿಲ್ಲ" ಎಂದು ಹೇಳಿದರು.

ಮಹಿಳಾ ಮೀಸಲಾತಿ ಕುರಿತು ಮಾತನಾಡಿದ ಅವರು, ಬಿಜೆಪಿಯು ಶೇ 33 ರಷ್ಟು ಮಹಿಳಾ ಮೀಸಲಾತಿ ನೀಡಿದ ಮೊದಲ ಪಕ್ಷ ಎಂದು ಹೇಳಿದರು.

"ನಿರ್ಮಲಾ ಸೀತಾರಾಮನ್ ಮತ್ತು ನನ್ನಂತಹ ಮಹಿಳೆಯರು ಸಾಂಸ್ಥಿಕ ಸ್ಥಾನಗಳನ್ನು ಪಡೆದರು. ಉನ್ನತ ಕಚೇರಿಗಳಲ್ಲಿ ಸೇವೆ ಸಲ್ಲಿಸಲು ಇಂದಿಗೂ ಅವಕಾಶವಿಲ್ಲದ ಅನೇಕ ಮಹಿಳೆಯರು ಇದ್ದಾರೆ. ಇಂದು ನೀವು ಮಹಿಳೆಯರ ರಾಜಕೀಯ ಸಬಲೀಕರಣದ ಬಗ್ಗೆ ಮಾತನಾಡುವ ಜಾಗತಿಕ ಸೂಚ್ಯಂಕಗಳನ್ನು ನೋಡಿದರೆ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿಲ್ಲ" ಎಂದು ಸ್ಮೃತಿ ಇರಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News