ಇಲೆಕ್ಟೋರಲ್ ಬಾಂಡ್ ಗಳ ಮಾರಾಟಕ್ಕೆ ತಡೆ ಹೇರಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಹೊಸ ಇಲೆಕ್ಟೋರಲ್ ಬಾಂಡ್‍ಗಳನ್ನು ಎಪ್ರಿಲ್ 1ರಿಂದ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಇಲೆಕ್ಟೋರಲ್ ಬಾಂಡ್‍ಗಳಿಲ್ಲದೇ ಇದ್ದರೆ ರಾಜಕೀಯ ಪಕ್ಷಗಳು ನಗದನ್ನೇ ಬಳಸುವುದರಿಂದ ಇಲೆಕ್ಟೋರಲ್ ಬಾಂಡ್ ಗಳಿಗೆ ತನ್ನ ಅನುಮತಿಯಿದೆ ಎಂದು ಚುನಾವಣಾ ಆಯೋಗ ನೀಡಿದ ಹೇಳಿಕೆಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಆದರೆ ಇಲೆಕ್ಟೋರಲ್ ಬಾಂಡ್‍ಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಹೆಚ್ಚು ಪಾರದರ್ಶಕತೆ ತರಲು ತಾನು ಬಯಸಿದ್ದಾಗಿ ಚುನಾವಣಾ ಆಯೋಗ ಹೇಳಿದೆ.
"ಇಲೆಕ್ಟೋರಲ್ ಬಾಂಡ್‍ಗಳ ಬಿಡುಗಡೆಗೆ 2018 ಹಾಗೂ 2019ರಲ್ಲಿಯೂ ಯಾವುದೇ ಅಡೆತಡೆಗಳಿಲ್ಲದೆ ಅನುಮತಿ ನೀಡಿರುವಾಗ ಹಾಗೂ ಅಗತ್ಯ ಮುನ್ನೆಚ್ಚರಿಕೆಗಳೂ ಇರುವುದರಿಂದ ಈಗ ಇಲೆಕ್ಟೋರಲ್ ಬಾಂಡ್‍ಗಳಿಗೆ ತಡೆ ಹೇರಬೇಕೆಂಬುದರಲ್ಲಿ ಸಮರ್ಥನೆಯಿಲ್ಲ" ಎಂದು ಇಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಪ್ರಿಲ್ 1 ಹಾಗೂ ಎಪ್ರಿಲ್ 10ರ ನಡುವೆ ಇಲೆಕ್ಟೋರಲ್ ಬಾಂಡ್‍ಗಳ ಮಾರಾಟಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಬೇಕೆಂದು ಕೋರಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಅಪೀಲು ಸಲ್ಲಿಸಿತ್ತು.
ರಾಜಕೀಯ ಪಕ್ಷಗಳಿಗೆ ದೊರೆಯುವ ದೇಣಿಗೆ ಹಾಗೂ ಅವುಗಳ ಲೆಕ್ಕಪತ್ರಗಳಲ್ಲಿನ ಪಾರದರ್ಶಕತೆ ಕುರಿತ ವಿಚಾರಗಳು ಇತ್ಯರ್ಥವಾಗುವ ತನಕ ಬಾಂಡ್‍ಗಳ ಮಾರಾಟಕ್ಕೆ ತಡೆ ಹೇರುವಂತೆ ಹಾಗೂ ಪಶ್ಚಿಮ ಬಂಗಾಲ, ಅಸ್ಸಾಂ ಮತ್ತಿತರ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವುದರಿಂದ ಕೆಲ ಕಂಪನಿಗಳು ರಾಜಕೀಯ ಪಕ್ಷಗಳ ಬೊಕ್ಕಸ ತುಂಬಿಸಬಹುದೆಂಬ ಸಂದೇಹದ ಹಿನ್ನೆಲೆಯಲ್ಲಿ ಎಡಿಆರ್ ತನ್ನ ಅಪೀಲು ಸಲ್ಲಿಸಿತ್ತು.
"ಆಡಳಿತ ಪಕ್ಷವು ದೇಣಿಗೆ ಹೆಸರಿನಲ್ಲಿ ಲಂಚ ಪಡೆಯಲು ಇಲೆಕ್ಟೋರಲ್ ಬಾಂಡ್‍ಗಳನ್ನು ಬಳಸುತ್ತಿದೆ, ಜಗತ್ತಿನಲ್ಲಿ ಎಲ್ಲಿಯೂ ಈ ರೀತಿ ನಡೆಯುವುದಿಲ್ಲ, ಯಾರು, ಯಾವ ಪಕ್ಷಕ್ಕೆ ಎಷ್ಟು ನೀಡಿದ್ದಾರೆಂದು ತಿಳಿಯುವುದಿಲ್ಲ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅದರ ಮುಖಾಂತರ ಸರಕಾರಕ್ಕೆ ಮಾತ್ರ ತಿಳಿಯುತ್ತದೆ" ಎಂದು ಎಡಿಆರ್ ಪರ ವಾದಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ವಾದ ಮಂಡನೆ ವೇಳೆ ಹೇಳಿದ್ದರು.
ಆದರೆ ಇಂತಹ ದೇಣಿಗೆಗಳನ್ನು ಆಡಳಿತ ಪಕ್ಷ ಮಾತ್ರ ಪಡೆಯುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.