ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
ಮಂಗಳೂರು : ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 30ನೇ ಪದವಿ ಪ್ರದಾನ ಸಮಾರಂಭವು ಹೊಸದಾಗಿ ನವೀಕರಿಸಿದ ದೇರಳಕಟ್ಟೆಯ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದ ಗಣ್ಯವ್ಯಕ್ತಿಗಳಾದ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಉಪಾಧ್ಯಕ್ಷರಾದ ರೆವರೆಂಡ್ ಮೊನ್ಸಿಂಜರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ, ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂ. ರೋಶನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಡಾ. ಶಿವಪ್ರಸಾದ್ ಕೆ. ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ರಂಜನ್ ಕ್ಲೆಮೆಂಟ್ ಬ್ರಿಟ್ಟೊರನ್ನು ಸ್ವಾಗತಿಸಲಾಯಿತು.
ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿ, ಸಂಸ್ಥೆಯ ಚರಿತ್ರೆ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿನ ಅಭಿವೃದ್ಧಿ ಬಗ್ಗೆ ತಿಳಿಸಿದರು ಹಾಗೂ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿರುವ ರೆವರೆಂಡ್ ಮೊನ್ಸಿಂಜರ್ ಮ್ಯಾಕ್ಸಿಮ್ ಎಲ್. ನೊರೊನ್ಹಾರನ್ನು ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ವಾರ್ಷಿಕ ವರದಿಯಲ್ಲಿ 2019-20ರಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು. ಡಾ. ವಿಲ್ಮಾ ಮೀರಾ ಡಿ’ಸೋಜ ಪದವೀದರರ ಹೆಸರುಗಳನ್ನು ಘೋಷಿಸಿದರು. ಕಾರ್ಯಕ್ರಮದ ಅಧ್ಯಕ್ಷರು ಪ್ರಮಾಣಪತ್ರ ಮತ್ತು ಪದಕದೊಂದಿಗೆ ಪದವೀದರರನ್ನು ಸನ್ಮಾನಿಸಿದರು.
ಡಾ. ಇ.ಎಸ್.ಜೆ. ಪ್ರಭು ಕಿರಣ್ ಹೋಮಿಯೋಪಥಿ ವೈದ್ಯರ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದರಲ್ಲಿ 96 ಹೋಮಿಯೋಪಥಿ ಪದವಿ ಹಾಗೂ 25 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪ್ರಮಾಣವಚನವನ್ನು ಸ್ವೀಕರಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿರುವ 2018 ಮತ್ತು 2019ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಶಂಸನೀಯ ವಿದ್ಯಾರ್ಥಿಗಳಿಗೆ ಪದಕವನ್ನು ನೀಡಿ ಅಭಿನಂದಿಸಲಾಯಿತು. ಅವರಲ್ಲಿ ಹೋಮಿಯೋಪಥಿ ಪದವಿಯ ಶೈಕ್ಷಣಿಕ ವರ್ಷ 2014-15ರ 6 ರ್ಯಾಂಕ್ ವಿಜೇತ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿಯ ಶೈಕ್ಷಣಿಕ ವರ್ಷ 2016-17ರ 8 ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯ ಘೋಷಿಸಿದ 11 ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಸೇರಿರುವರು.
ರೆವರೆಂಡ್ ಮೊನ್ಸಿಂಜರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಶಸ್ತಿ ಪಡೆದಿರುವ ಪದವೀದರರನ್ನು ಅಭಿನಂದಿಸಿ, ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪದವೀದರರ ಪರವಾಗಿ ಡಾ. ರಿಯಾ ಸೂಸನ್ ರವರು ಪ್ರತಿಕ್ರಿಯೆ ವ್ಯಕ್ತ ಪಡಿಸಿದರು.
ಪ್ರತಿಷ್ಠಿತ ಅಧ್ಯಕ್ಷೀಯ ಚಿನ್ನದ ಪದಕವನ್ನು ಅತ್ಯುತ್ತಮ ಸಾಧನೆ ಮಾಡಿದ ಹೋಮಿಯೋಪಥಿ ಪದವಿ ವಿದ್ಯಾರ್ಥಿ ಡಾ. ಮರಿಯ ಶಾಜು ಅವರಿಗೆ ನೀಡಿ ಸನ್ಮಾನಿಸಲಾಯಿತು. ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ಜೀನ್ ಮ್ಯಾಥ್ಯೂ ಅಬ್ರಾಹಂರನ್ನು ವಿಶೇಷ ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ಒಟ್ಟಾಗಿ 25 ವಿದ್ಯಾರ್ಥಿಗಳು ಅವರ ಅತ್ಯುತ್ತಮ ಸಾಧನೆಗಳಿಗೋಸ್ಕರ ಸಂಸ್ಥೆಯ ಪ್ರತಿಷ್ಠಿತ ವಿದ್ಯಾರ್ಥಿ ಪದಕವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರು ಹಾಗೂ ಆರ್ಗನನ್ ಆಫ್ ಮೆಡಿಸನ್ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿರುವ ಡಾ ಶಿವಪ್ರಸಾದ್ ಕೆ. ಅವರು ಸಂಸ್ಥೆಗೆ ನೀಡಿರುವ ಸೇವೆ ಹಾಗೂ ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರದಲ್ಲಿ ಸಮಾಜಕ್ಕೆ ಅವರು ನೀಡಿರುವ ಕೊಡುಗೆಯನ್ನು ಶ್ಲಾಘಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರು ಈ ಸನ್ಮಾನ ಕಾರ್ಯವನ್ನು ನೆರವೇರಿಸಿದರು. ಡಾ. ಶಿವಪ್ರಸಾದ್ ಕೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಂ. ರೋಶನ್ ಕ್ರಾಸ್ತಾರವರು ವಂದನಾರ್ಪಣೆಗೈದರು. ಡಾ. ಜಿ. ರಾಜಚಂದ್ರ ಹಾಗೂ ಡಾ. ಶ್ವೇತಾ ಭಟ್ ಕಾರ್ಯಕ್ರಮ ನಿರೂಪಿಸಿದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪದವಿ ಪ್ರದಾನ ಸ್ವೀಕರಿಸುವ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.