×
Ad

​ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮೇ 9ರಂದು ಚುನಾವಣೆ

Update: 2021-03-26 18:13 IST

ಉಡುಪಿ, ಮಾ.26: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕಾರ್ಯಕಾರಿ ಮಂಡಳಿಗೆ ಮೇ 9ರಂದು ಚುನಾವಣೆ ನಡೆಯಲು ದಿನ ನಿಗದಿಯಾಗಿದ್ದು, ಜಿಲ್ಲಾ ಕೇಂದ್ರವಾದ ಉಡುಪಿ ತಾಲೂಕು ತಹಶೀಲ್ದಾರ್‌ರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಅದೇ ರೀತಿ ಇತರ ಮತಗಟ್ಟೆಗಳಿರುವ ಆಯಾ ತಾಲೂಕುಗಳ ತಹಶೀಲ್ದಾರ್‌ಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಇದರಂತೆ ಜಿಲ್ಲಾ ಕಸಾಪ ಚುನಾವಣೆಗೆ ಮತಗಟ್ಟೆ ಇರುವ ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರುಗಳ ತಹಶೀಲ್ದಾರ್‌ಗಳನ್ನು ಆಯಾ ತಾಲೂಕಿನ ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿ ಚುನಾವಣೆ-2021ಕ್ಕೆ ಸಂಬಂಧಿಸಿದಂತೆ ಮಾ.25ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮಾ.29ರಿಂದ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಎ.7 ನಾಮಪತ್ರಗಳ ಸ್ವೀಕಾರಕ್ಕೆ ಕೊನೆಯ ದಿನವಾಗಿರುತ್ತದೆ. ಎ.8ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಎ.12 ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಅದೇ ದಿನ ಅಭ್ಯರ್ಥಿಗಳ ಅಂತಿಮ ಪಟ್ಟಿಯ ಪ್ರಕಟಿಸಲಾಗುತ್ತದೆ.

ಅಗತ್ಯ ಬಿದ್ದರೆ ರಾಜ್ಯ ಕಸಾಪ ಅಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮೇ 9ರಂದು ಮತದಾನ ನಡೆಯಲಿದೆ. ಅದೇ ದಿನ ಮತಗಳ ಎಣಿಕೆ ನಡೆದು ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲಿ ಚ್ಛಿಸುವ ಅಭ್ಯರ್ಥಿಗಳು ಮಾ.29ರಿಂದ ಎ.7ರವರೆಗೆ ಪ್ರತಿದಿನ ಬೆಳಗ್ಗೆ 11:00ರಿಂದ ಸಂಜೆ 5:00ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.ತಮ್ಮ ಅನುಪಸ್ಥಿತಿಯಲ್ಲಿ ನಾಮಪತ್ರಗಳ ಸ್ವೀಕಾರ, ಪರಿಶೀಲನೆ, ಹಿಂದೆಗೆದುಕೊಳ್ಳುವಿಕೆ, ಅಂತಿಮ ಅಭ್ಯರ್ಥಿಗಳ ಹೆಸರು ಪ್ರಕಟ ಹಾಗೂ ಇನ್ನಿತರ ಚುನಾವಣಾ ಕರ್ತವ್ಯವನ್ನು ನಿರ್ವಹಿಸಲು ಬ್ರಹ್ಮಾವರ ತಾಲೂಕು ತಹಶೀಲ್ದಾರ್ ಅವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿರುವುದಾಗಿ ಜಿಲ್ಲಾ ಕಸಾಪ ಚುನಾವಣಾಧಿಕಾರಿಗಳಾದ ಉಡುಪಿ ತಾಲೂಕು ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News