ರೈತರ ಭಾರತ ಬಂದ್‌ಗೆ ದಿಲ್ಲಿಯಲ್ಲಿ ನೀರಸ ಪ್ರತಿಕ್ರಿಯೆ
ಹೊಸದಿಲ್ಲಿ,ಮಾ.26: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಭಾರತ ಬಂದ್‌ಗೆ ದಿಲ್ಲಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಮೆಟ್ರೋ ರೈಲು ಸೇವೆ ಮತ್ತು ಸಾರ್ವಜನಿಕ ಸಾರಿಗೆ ಸೇವೆಗಳು ಎಂದಿನಂತೆ ಕಾರ್ಯಾಚರಿಸಿದವು. ಪ್ರಮುಖ ಮಾರುಕಟ್ಟೆಗಳೂ ತೆರೆದಿದ್ದು,ಯಾವುದೇ ಸ್ಥಿತಿಯನ್ನು ಎದುರಿಸಲು ಪೊಲೀಸರು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದರು.
ರೈತ ಸಂಘಟನೆಗಳು ಕರೆ ನೀಡಿದ್ದ 12 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ ಬೆಳಿಗ್ಗೆ ಆರು ಗಂಟೆಯಿಂದ ಆರಂಭಗೊಂಡಿತ್ತು.
ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಸಹಜ ಸ್ಥಿತಿಯಿತ್ತು. ಕನಾಟ್ ಪ್ಲೇಸ್,ಕರೋಲ್ ಬಾಗ್,ಕಾಶ್ಮೀರಿ ಗೇಟ್,ಚಾಂದನಿ ಚೌಕ್ ಮತ್ತು ಸದರ್ ಪ್ರದೇಶಗಳಲ್ಲಿಯ ಮಾರುಕಟ್ಟೆಗಳು ಎಂದಿನಂತೆ ಕಾರ್ಯಾಚರಿಸಿದವು. ಖಾನ್ ಮಾರ್ಕೆಟ್‌ನಲ್ಲಿಯ ಅಂಗಡಿಗಳೂ ತೆರೆದಿದ್ದವು.
ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿರುವುದು ವರದಿಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ದಿಲ್ಲಿಯ ಗಾಝಿಪುರ ಗಡಿಯಲ್ಲಿ ಪ್ರತಿಭಟನಾನಿರತ ರೈತರು ಬೆಳಿಗ್ಗೆ ದಿಲ್ಲಿ- ಗಾಝಿಯಾಬಾದ್ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದರು,ಆದರೆ ನಗರದಲ್ಲಿ ಪ್ರತಿಭಟನಾಕಾರರ ಹೆಚ್ಚಿನ ಚಟುವಟಿಕೆಗಳು ಕಂಡುಬಂದಿರಲಿಲ್ಲ.
ದಿಲ್ಲಿ ಮೆಟ್ರೊ ರೇಲ್ ಕಾರ್ಪೊರೇಷನ್ ಟಿಕ್ರಿ ಬಾರ್ಡರ್,ಬಹಾದುರಗಡ ಸಿಟಿ ಮತ್ತು ಬ್ರಿಗೇಡಿಯರ್ ಹೋಷಿಯಾರ ಸಿಂಗ್ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕೆಲಕಾಲ ಮುಚ್ಚಿತ್ತಾದರೂ ಬಳಿಕ ಪ್ರಯಾಣಿಕರಿಗೆ ನಿಲ್ದಾಣಗಳನ್ನು ತೆರೆಯಲಾಗಿತ್ತು.
ಮಾಯಾಪುರಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಜನರು ಶಾಂತಿಯುತವಾಗಿ ಪ್ರತಿಭಟನೆಗಳನ್ನು ನಡೆಸಿದರು ಎಂದು ರೈತ ನಾಯಕರೋರ್ವರು ತಿಳಿಸಿದರು.
ವಿವಿಧ ರೈತ ಸಂಘಟನೆಗಳು,ಕಾರ್ಮಿಕ ಒಕ್ಕೂಟಗಳು,ವಿದ್ಯಾರ್ಥಿ ಸಂಘಗಳು,ವಕೀಲರ ಸಂಘಗಳು,ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರಕಾರಗಳ ಪ್ರತಿನಿಧಿಗಳು ಭಾರತ ಬಂದ್ ಕರೆಯನ್ನು ಬೆಂಬಲಿಸಿದ್ದಾರೆ ಎಂದು ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.