ಸುಯೆಝ್ ಕಾಲುವೆಯಲ್ಲಿ ಸಿಲುಕಿದ ದೈತ್ಯ ಹಡಗು; ಗಂಟೆಗೆ 400 ಮಿಲಿಯನ್ ಡಾಲರ್ ನಷ್ಟ!
ಹೊಸದಿಲ್ಲಿ: ಈಜಿಪ್ಟ್ ನ ಸುಯೆಝ್ ಕಾಲುವೆ ಮಧ್ಯೆ ಕಳೆದ ಮೂರು ದಿನಗಳಿಂದ ಸಿಲುಕಿಗೊಂಡಿರುವ 400 ಮೀಟರ್ ಉದ್ದದ ಬೃಹತ್ ಸರಕು ಹಡಗು ಜಾಗತಿಕ ಹಡಗು ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ರೆಡ್ ಸೀ ಮುಖಾಂತರ ಕಡಿದಾದ ಕಾಲುವೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಜಪಾನ್ ದೇಶದ `ಎವರ್ ಗಿವನ್' ಎಂಬ ಈ ದೈತ್ಯ ಹಡಗಿನಿಂದಾಗಿ ಜಾಗತಿಕ ಜಲಮಾರ್ಗ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದ್ದು ಬಿಲಿಯಗಟ್ಟಲೆ ಡಾಲರ್ ನಷ್ಟ ಉಂಟಾಗುತ್ತಿದೆ. ಈ ಹಡಗನ್ನು ಆ ಸ್ಥಳದಿಂದ ಬಂದರಿಗೆ ಸಾಗಿಸುವುದು ಹರಸಾಹಸದ ಕೆಲಸವೆಂದೇ ತಿಳಿಯಲಾಗಿದೆ.
ಎವರ್ ಗಿವನ್ ಹಡಗನ್ನು ಅಲ್ಲಿಂದ ಸಾಗಿಸಲು ಯತ್ನ ನಡೆಸುವ ಜವಾಬ್ದಾರಿ ನೀಡಲಾಗಿರುವ ಎರಡು ಸಂಸ್ಥೆಗಳ ಪೈಕಿ ಒಂದಾಗಿರುವ ಡೆನ್ಮಾರ್ಕ್‍ನ ಬೊಸ್ಲಾಲಿಸ್ ಸಂಸ್ಥೆಯ ಸಿಒಇಒ ಪೀಟರ್ ಬೆರ್ಡೊವೊಸ್ಕಿ ಅವರ ಪ್ರಕಾರ ಈ ಕೆಲಸ ಪೂರ್ಣಗೊಳಿಸಲು ವಾರಗಳೇ ಬೇಕಾಗಬಹುದು.
ತರುವಾಯ ಸುಯೆಜ್ ಕಾಲುವೆ ಪ್ರಾಧಿಕಾರ ಈ ಅತ್ಯಂತ ಮಹತ್ವದ ಕಾಲುವೆ ಮುಖಾಂತರ ಎಲ್ಲಾ ಸಂಚಾರ ನಿಲ್ಲಿಸಿದೆ. ಪ್ರತಿ ದಿನ ಈ ಕಾಲುವೆ ಮೂಲಕ ಸುಮಾರು 50 ಸರಕು ಹಡಗುಗಳು ಹಾದು ಹೋಗುತ್ತವೆ ಹಾಗೂ ಸರಾಸರಿ ಜಾಗತಿಕ ಹಡಗು ಸಂಚಾರದ ಶೇ 30ರಷ್ಟು ಹಡಗುಗಳು ವಾರ್ಷಿಕವಾಗಿ ಈ ಕಾಲುವೆ ಮೂಲಕ ಸಾಗುತ್ತವೆ.
ಈ ದೈತ್ಯ ಹಡಗು ಕಾಲುವೆಯಲ್ಲಿ ಸಿಲುಕಿಗೊಂಡಿರುವುದರಿಂದ ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದ ಕಂಗೆಟ್ಟಿರುವ ದೇಶಗಳು ಇನ್ನಷ್ಟು ಸಮಸ್ಯೆ ಎದುರಿಸುವ ಸಾಧ್ಯತೆಯಿದ್ದು ಸದ್ಯ ಹಡಗುಗಳು ಸುತ್ತುಬಳಸಿ ಸಾಗಬೇಕಾಗಿರುವುದಿಂದ ಕಚ್ಛಾ ತೈಲ ಹಾಗೂ ಆಹಾರಧಾನ್ಯಗಳ ಬೆಲೆಗಳಲ್ಲೂ ಏರಿಕೆಯಾಗುವ ಸಾಧ್ಯತೆಯದೆ.
ಈಗಾಗಲೇ ಸುಯೆಜ್ ಕಾಲುವೆ ಬಂದ್ ಆಗಿರುವುದರಿಂದ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ನಷ್ಟ ಉಂಟಾಗುತ್ತಿದೆ. ಈ ದೈತ್ಯ ಹಡಗು 2.20 ಲಕ್ಷ ಟನ್ ಭಾರವಿದ್ದು, 193.3 ಕಿಮೀ ಉದ್ದವಿರುವ ಕಿರಿದಾದ ಸುಯೆಜ್ ಕಾಲುವೆಯನ್ನು ವಸ್ತುಶಃ ಬ್ಲಾಕ್ ಮಾಡಿದೆ. ಈ ಹಾದಿಯಲ್ಲಿ ಸಾಮಾನ್ಯವಾಗಿ ಸಾಗುವ ಸರಕು ನೌಕೆಗಳು ಹೆಚ್ಚಾಗಿ ತೈಲ, ಸಂಸ್ಕರಿತ ತೈಲ, ಆಹಾರ ಧಾನ್ಯ ಸಾಗಿಸುತ್ತವೆಯಲ್ಲದೆ ಪೂರ್ವ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ವ್ಯಾಪಾರ ವಹಿವಾಟಿಗೆ ಮಹತ್ವದ ಕೊಂಡಿಯಾಗಿದೆ.
ಈಗಾಗಲೇ ಈ ಹಾದಿಯಲ್ಲಿ ಆಗಮಿಸಿದ್ದ ಸುಮಾರು 200 ಬೃಹತ್ ಕಂಟೇನರ್ ಹಡಗುಗಳು ಮತ್ತೆ ಹಿಂದಕ್ಕೆ ಚಲಿಸುವಂತಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಈ ಹಡಗುಗಳು ತಮ್ಮ ನಿಗದಿತ ಸ್ಥಳ ತಲುಪಲು ಐದಾರು ದಿನ ಹೆಚ್ಚುವರಿ ಪ್ರಯಾಣಿಸಬೇಕಾಗಿದೆ. ಈ ಬೆಳವಣಿಗೆ ಇ-ಕಾಮರ್ಸ್ ಸಂಸ್ಥೆಗಳು ಸೇರಿದಂತೆ ಹಲವಾರು ಸಂಸ್ಥೆಗಳಿಗೆ ಆತಂಕ ಮೂಡಿಸಿದೆ.
Suez Canal blockage adds strain to global supply chains https://t.co/rGqkRfptUB pic.twitter.com/dAfjBmOo72
— Reuters (@Reuters) March 26, 2021