ದಿಲ್ಲಿಯ ಜಿಟಿಬಿ ಆಸ್ಪತ್ರೆಯಲ್ಲಿ ಗುಂಡಿನ ಕಾಳಗ: ಪೊಲೀಸ್ ಕಸ್ಟಡಿಯಿಂದ ಕುಖ್ಯಾತ ಪಾತಕಿ ಪರಾರಿ
ಹೊಸದಿಲ್ಲಿ,ಮಾ.26: ಇಲ್ಲಿಯ ಸರಕಾರಿ ಆಸ್ಪತ್ರೆಯೊಂದರಲ್ಲಿ ಗುರುವಾರ ಹಾಡಹಗಲೇ ಭೀಕರ ಗುಂಡಿನ ಕಾಳಗ ನಡೆದಿದ್ದು,ಈ ವೇಳೆ ಪೊಲೀಸರ ವಶದಲ್ಲಿದ್ದ ಕುಖ್ಯಾತ ಪಾತಕಿಯೋರ್ವ ಪರಾರಿಯಾಗಿದ್ದಾನೆ. ಬೆಂಗಾವಲಿಗಿದ್ದ ಪೊಲೀಸ್ ತಂಡ ಮತ್ತು ಪಾತಕಿಯ ಪರಾರಿಗೆ ನೆರವಾಗಲು ಬಂದವರ ನಡುವೆ ಗುಂಡಿನ ಚಕಮಕಿ ನಡೆದಾಗ ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಅವರ ಸಂಬಂಧಿಗಳು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುವಂತಾಗಿತ್ತು.
ಮಂಡೋಲಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಗ್ಯಾಂಗ್‌ಸ್ಟರ್ ಕುಲದೀಪ್ ಅಲಿಯಾಸ್ ಫಜ್ಜಾ ಎಂಬಾತ ಗುಂಡಿನ ಕಾಳಗದ ನಡುವೆ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದು,ಆತನ ಆರು ಸಹಚರರ ಪೈಕಿ ಗಾಯಗೊಂಡಿದ್ದ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇತರ ದಾಳಿಕೋರರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಮಧ್ಯಾಹ್ನ 12:24ರ ಸುಮಾರಿಗೆ ಪೊಲೀಸರು ಕುಖ್ಯಾತ ಗ್ಯಾಂಗ್‌ಸ್ಟರ್ ಜಿತೇಂದ್ರ ಮಾನ್ ಅಲಿಯಾಸ್ ಗೋಗಿಯ ನಿಕಟವರ್ತಿ ಫಜ್ಜಾನನ್ನು ಚಿಕಿತ್ಸೆಗಾಗಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗಕ್ಕೆ ಕರೆತಂದಿದ್ದರು. ತಪಾಸಣೆಯ ಬಳಿಕ ಫಜ್ಜಾನನ್ನು ಪೊಲೀಸ್ ವಾಹನದತ್ತ ಕರೆದೊಯ್ಯುತ್ತಿದ್ದಾಗ ಆಸ್ಪತ್ರೆಯ ಹಿಂಬದಿಯ ದ್ವಾರದಿಂದ ಸ್ಕಾರ್ಪಿಯೊ ವಾಹನ ಮತ್ತು ಬೈಕ್‌ನಲ್ಲಿ ಬಂದಿದ್ದ ಐದರಿಂದ ಆರು ದಾಳಿಕೋರರು ಮೊದಲು ಪೊಲೀಸ್ ತಂಡದತ್ತ ಖಾರದ ಹುಡಿಯನ್ನು ಎರಚಿ ಬಳಿಕ ಗುಂಡು ಹಾರಾಟ ನಡೆಸಿದ್ದರು. ಪ್ರತಿದಾಳಿ ನಡೆಸಿದ ಪೊಲೀಸರು 12 ಸುತ್ತು ಗುಂಡುಗಳನ್ನು ಹಾರಿಸಿದ್ದು,ದಾಳಿಕೋರರ ಪೈಕಿ ರವಿ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟು,ಅಂಕೇಶ ಎಂಬಾತ ಗಾಯಗೊಂಡಿದ್ದಾನೆ ಎಂದು ಜಂಟಿ ಪೊಲೀಸ್ ಆಯುಕ್ತ (ಪೂರ್ವ) ಅಲೋಕ್ ಕುಮಾರ್ ಅವರು ತಿಳಿಸಿದರು.