​ಕೃಷ್ಣ ಮಠದಲ್ಲಿ ಎ.13ರಿಂದ 27ರವರೆಗೆ ರಾಮನವಮಿ ಉತ್ಸವ

Update: 2021-03-26 14:45 GMT

ಉಡುಪಿ, ಮಾ.26: ಶ್ರೀಕೃಷ್ಣ ಮಠ, ಪಯಾರ್ಯ ಅದಮಾರು ಮಠಗಳ ವತಿಯಿಂದ ಶ್ರೀರಾಮ ನಮವಿ-ಹನುಮಜ್ಜಯಂತಿ ಉತ್ಸವ ಎ.13ರಿಂದ 27ರವರೆಗೆ ವಿವಿಧ ವಿದ್ವಾಂಸರಿಂದ ಚಿಂತನಪ್ರಸ್ತುತಿ, ಹಲವು ಧಾರ್ಮಿಕ ಹಾಗೂ ಆಧ್ಮಾತಿಕ, ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳೊಂದಿಗೆ 15 ದಿನಗಳ ಕಾಲ ನಡೆಯಲಿದೆ ಎಂದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಗಳು ಪ್ರತಿದಿನ ಸಂಜೆ 3:45ರಿಂದ 6:30ರವರೆಗೆ ರಾಜಾಂಗಣದ ಶ್ರೀನರಹರಿತೀರ್ಥ ವೇದಿಕೆಯಲ್ಲಿ ನಡೆಯಲಿದೆ. ಪ್ರತಿದಿನ ರಾಮಾಯಣದ ವಿವಿಧ ಅಂಶಗಳ ಕುರಿತು ನಾಡಿನ ಪ್ರಮುಖ ವಿದ್ವಾಂಸರು ಹಾಗೂ ವಿವಿಧ ಮಠಾಧೀಶರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಖ್ಯಾತ ಪುರಾತತ್ವ ಶಾಸ್ತ್ರಜ್ಞರಾದ ಡಾ.ಕೆ.ಕೆ.ಮುಹಮ್ಮದ್ ಅವರು ಎ.15 ಮತ್ತು 16ರಂದು ಅಯೋಧ್ಯೆಯ ಉತ್ಖನನ ಹಾಗೂ ಸಂಶೋಧನೆಗಳು ಮತ್ತು ಚಂಬಲ್ ಕಣಿವೆಯಲ್ಲಿ ದೇವಸ್ಥಾನಗಳ ರಕ್ಷಣೆಯಲ್ಲಿ ಢಕಾಯಿತರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಶಿಲ್ಪ ರಾಮಾಯಣದ ಕುರಿತು ಸಂಶೋಧಕ ಡಾ.ಅರ್ಜುನ ಭಾರದ್ವಾಜ್ ಅವರು ಉಪನ್ಯಾಸ ನೀಡುವರು ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ರಾಮಜನ್ಮ ಭೂಮಿ ಪರವಾಗಿ ವಾದಿಸಿದ ದೇಶದ ಹಿರಿಯ ನ್ಯಾಯವಾದಿ ಮೋಹನ್ ಪರಾಶರನ್ ಅವರು ಎ.18ರಂದು ರಾಮಜನ್ಮಭೂಮಿ ಕೌತುಕ ಎಂಬ ವಿಷಯದ ಕುರಿತು ಮಾತನಾಡುವರು. ಕೇಂದ್ರ ಸಚಿವ ಪ್ರತಾಪಚಂದ್ರ ಸಾರಂಗಿ ಸನಾತನ ಧರ್ಮ ಮತ್ತು ಶ್ರೀರಾಮ, ಎ.21ರಂದು ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ‘ನ್ಯಾಯ ರಾಮಾಯಣ’ ಕುರಿತು ಮಾತನಾಡುವರು.

ಅಟ್ಲಾಂಟಾದ ಹಿರಿಯ ಸಂಶೋಧಕ ಡಾ.ನೀಲೇಶ್ ನೀಲಕಂಠ ಓಕ್‌ಜೀ ಅವರು ಮೂರು ದಿನಗಳ ಕಾಲ ರಾಮಾಯಣ ಪಥ ಮಾಲಿಕೆಯಲ್ಲಿ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದರು. ಮೊದಲ ದಿನದಂದು ಗೌರವ ಡಾಕ್ಟರೇಟ್ ಪಡೆದಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಪರ್ಯಾಯ ಅದಮಾರು ಮಠ ಹಾಗೂ ಸಂಸ್ಕೃತ ಕಾಲೇಜಿನ ವತಿಯಿಂದ ಸನ್ಮಾನ ನಡೆಯಲಿದೆ.

ಅಲ್ಲದೇ ಇದೇ ವೇಳೆ ಪ್ರಾಚೀ ಉಡುಪಿ, ಧಾತು ಬೆಂಗಳೂರು, ರಾಮ್‌ಸನ್ಸ್ ಮೈಸೂರು ಇವರಿಂದ ನಡೆಯುವ ಸಾಂಪ್ರದಾಯಿಕ ಚಿತ್ರಕಲಾ ಶಿಬಿರ, ರಾಮಾಯಣ ಕಲಾಕೃತಿ, ಗೊಂಬೆ ಪ್ರದರ್ಶನದ ಉದ್ಘಾಟನೆ ಎ.13ರಂದು ಸಂಜೆ 6:35ಕ್ಕೆ ನಡೆಯಲಿದೆ. ಪ್ರತಿದಿನ ಸಂಜೆ 7:00 ದೇಶದ ಖ್ಯಾತನಾಮ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಅಲ್ಲದೇ ಪ್ರತಿದಿನ ಒಬ್ಬ ಹಿರಿಯ ಗಣ್ಯ ವ್ಯಕ್ತಿಗಳಿಗೆ ಸನ್ಮಾನವೂ ನಡೆಯಲಿದೆ.

ಇತ್ತೀಚೆಗೆ ನೀಡಿದ ಹೇಳಿಕೆಯೊಂದರ ಹಿನ್ನೆಲೆಯಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರವಾದ ಟೀಕೆಗೆ ಗುರಿಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಪರ್ಯಾಯಶ್ರೀಗಳು, ಈ ವಿಷಯದಲ್ಲಿ ನಾವು ಪೇಜಾವರಶ್ರೀಗಳಿಗೆ ಬೆಂಬಲ ನೀಡುತ್ತೇವೆ ಎಂದರು.

ಇಂದು ಶಿಕ್ಷಣದಲ್ಲಿ ಮೌಲ್ಯ ಕಣ್ಮರೆಯಾಗುತಿದ್ದು, ಇಂಥ ಸಂದರ್ಭದಲ್ಲಿ ದಾರಿ ತಪ್ಪುತ್ತಿರುವ ಯುವಜನಾಂಗಕ್ಕೆ ತಂದೆ-ತಾಯಿಯರು ಸರಿಯಾದ ಮಾರ್ಗದರ್ಶನ ನೀಡಬೇಕೆಂಬ ಕಾಳಜಿಯಲ್ಲಿ ಶ್ರೀಗಳು ಹೇಳಿಕೆ ನೀಡಿದ್ದು, ಅದನ್ನು ತಪ್ಪಾಗಿ ಅರ್ಥೈಸಿ ವ್ಯಾಖ್ಯಾನಿಸಲಾಗಿದೆ ಎಂದು ಹೇಳಿದರು.

ಕೃಷ್ಣ ಮಠದಲ್ಲಿ ಎಲ್ಲಾ ಯತಿಗಳಿಗೂ ಕನ್ನಡದ ಬಗ್ಗೆ ಕಾಳಜಿ ಇದೆ. ಇಲ್ಲಿ ಸ್ಥಳೀಯವಾದ ತುಳು ಭಾಷೆಯನ್ನು ಬೋರ್ಡ್‌ನಲ್ಲಿ ಬರೆಸಿದ್ದನ್ನು ಕೆಲವರು ಟೀಕಿಸಿ, ಹೆಸರು ಗಳಿಸಲು ನೋಡಿದರು. ಬಳಿಕ ವಿಷಾಧ ಸೂಚಿಸಿದರು ಎಂದು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಹೆಸರನ್ನು ಉಲ್ಲೇಖಿಸದೇ ಹೇಳಿದ ಅದಮಾರು ಶ್ರೀ, ಅವರು ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದೇ ಬೇರೆಯವರಿಗೆ ಸ್ಥಾನ ಬಿಟ್ಟುಕೊಟ್ಟು ರಾಮನ ಗುಣವನ್ನು ಪ್ರದರ್ಶಿಸಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ವೈ.ಎನ್.ರಾಮಚಂದ್ರ ರಾವ್, ಕಲಾವಿದ ಪುರುಷೋತ್ತಮ ಅಡ್ವೆ, ಪ್ರದೀಪ್ ರಾವ್, ಮಾಧವ ಉಪಾಧ್ಯ, ಕುತ್ಪಾಡಿ ಕೃಷ್ಣರಾಜ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News