ವಿಟ್ಲ: ಪೊಲೀಸರಿಗೆ ಗುಂಡು ಹಾರಾಟ ಪ್ರಕರಣ; ಕೇರಳದಿಂದ ಬಂದ ಕುಖ್ಯಾತ ತಂಡ ಪೊಲೀಸ್ ಬಲೆಗೆ

Update: 2021-03-26 16:32 GMT
ಬಂಧಿತ ಆರೋಪಿಗಳು

ಬಂಟ್ವಾಳ, ಮಾ.26: ಕೇರಳ ಪೊಲೀಸರ ಮೇಲೆ ಗುಂಡು ಹಾರಿಸಿ ತಲೆಮೆರಿಸಿಕೊಳ್ಳಲು ಕರ್ನಾಟಕಕ್ಕೆ ಬಂದಿದ್ದ ಕುಖ್ಯಾತ ಗ್ಯಾಂಗ್ ಒಂದರ ಮೂವರನ್ನು ವಿಟ್ಲ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ನಿವಾಸಿ ಅಬ್ದುಲ್ ಲತೀಫ್(26), ಮೀಯಪದವು ನಿವಾಸಿ ಶಾಕೀರ್(23), ಅಡ್ಕಂತಗುರಿ ನಿವಾಸಿ ಅಸ್ಪಾಕ್(23), ಬಂಧಿತ ಆರೋಪಿಗಳು. ಇವರು ಕುಖ್ಯಾತ 'ಡಿ ಗ್ಯಾಂಗ್' ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬಂಧಿತರಿಂದ ಒಂದು ಪಿಸ್ತೂಲ್, ಐ20 ಕಾರು, ಡ್ರಾಗರ್, 13 ಸಜೀವ ಗುಂಡುಗಳು, ಮಾದಕದ್ರವ್ಯ ಸಹಿತ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮೂವರ ವಿರುದ್ಧ ಕಾಸರಗೋಡು, ಕುಂಬಳೆ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಗಾಂಜಾ, ಅಪಹರಣ ಸಹಿತ ಹಲವು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಕಾಸರಗೋಡು ಜಿಲ್ಲೆಯ ಉಪ್ಪಳ ಹಿದಾಯತ್ ನಗರದ ಬಾರ್‌ ಒಂದಲ್ಲಿ ಗುರುವಾರ ಮಧ್ಯಾಹ್ನ ಎರಡು ತಂಡಗಳ ನಡುವೆ ಗ್ಯಾಂಗ್‌ ವಾರ್ ನಡೆದಿದ್ದು ಈ ವೇಳೆ ಒಂದು ತಂಡ ಗುಂಡಿನ ದಾಳಿ ನಡೆಸಿ ಪರಾರಿಯಾಗಿತ್ತು. ಗುಂಡಿನ ದಾಳಿ ನಡೆಸಿದ ತಂಡವನ್ನು ಹಿಂಬಾಲಿಸಿಕೊಂಡು ಬಂದ ಪೊಲೀಸರ ಕಡೆಗೆ ಮೀಯಾಪದವು ಎಂಬಲ್ಲಿ  ತಂಡ ಮತ್ತೆ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿತ್ತು ಎನ್ನಲಾಗಿದೆ.

ದುಷ್ಕರ್ಮಿಗಳು ಕರ್ನಾಟಕ ಕಡೆಗೆ ಬರುತ್ತಿರುವ ಬಗ್ಗೆ ಕೇರಳ ಪೊಲೀಸರು ಕರ್ನಾಟಕ ಪೊಲೀಸರಿಗೆ ನೀಡಿದ ಮಾಹಿತಿಯ ಮೇರೆಗೆ ವಿಟ್ಲ ಠಾಣಾ ಪೊಲೀಸರು ಸಾಲೆತ್ತೂರು ಸಮೀಪದ ಕಟ್ಟತ್ತಿಲ ಕೊಡಂಗೆ ಚೆಕ್ ಪೋಸ್ಟ್‌ನಲ್ಲಿ ರಾತ್ರಿಯಿಂದಲೇ ನಾಕಬಂಧಿ ಅಳವಡಿಸಿ ಕಾರ್ಯಾಚರಣೆಗೆ ಇಳಿದಿದ್ದರು.

ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಆಗಮಿಸಿದ ದುಷ್ಕರ್ಮಿಗಳ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಪೊಲೀಸರ ಕಡೆಗೆ ತಂಡ ಗುಂಡು ಹಾರಿಸಿದೆ. ಎಲ್ಲಾ ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ಆರೋಪಿಗಳ ಕಾರು ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು ರಸ್ತೆ ಬದಿ ಸರಿದು ನಿಂತಿದೆ. ಕಾರಿನಲ್ಲಿದ್ದ ಐವರಲ್ಲಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಎಸೈ ವಿನೋದ್ ಕುಮಾರ್ ರೆಡ್ಡಿ, ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ ಕುಮಾರ್, ಸಿಬ್ಬಂದಿಯಾದ ರವೀಶ್, ಡ್ಯಾನಿ ಫ್ರಾನ್ಸಿಸ್ ತಾವ್ರೋ, ಪ್ರಸನ್ನ, ಲೋಕೇಶ್, ಪ್ರತಾಪ್, ಹೇಮರಾಜ್ ಭಾಗವಹಿಸಿದ್ದರು.

ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ವೆಲೆಂಟೈನ್ ಡಿ ಸೋಜ, ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ. ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಸರಗೋಡು, ಪೈವಳಿಕೆ ಮತ್ತು ಮೀಯಪದವು ಭಾಗದಲ್ಲಿ ತಮ್ಮನ್ನು ಡಿ ಗ್ಯಾಂಗ್ ಎಂದು ಕರೆಸಿಕೊಳ್ಳುತ್ತಿದ್ದ ಈ ತಂಡ ತಮ್ಮ ಬಳಿ ಇದ್ದ ಪಿಸ್ತೂಲ್ ಅನ್ನು ಅಲ್ಲಲ್ಲಿ ಪ್ರದರ್ಶಿಸುತ್ತಿತ್ತು. ಪಿಸ್ತೂಲ್ ಹಿಡಿದಿರುವ ವೀಡಿಯೊ ಮತ್ತು ಫೋಟೊ ಸಾಮಾಜಿಕ ಲಾಲಾತಾಣಗಳಲ್ಲಿ ವೈರಲ್ ಮಾಡುತ್ತಿದ್ದರು. ಸ್ಟೇಟಸ್‌ನಲ್ಲೂ ಹಾಕುತ್ತಿದ್ದರು ಎನ್ನಲಾಗಿದೆ.

ಕೇರಳದಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿ ತಂಡವೊಂದು ಕರ್ನಾಟಕಕ್ಕೆ ಪರಾರಿಯಾಗುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಚೆಕ್ ಪೋಸ್ಟ್ ನಿರ್ಮಿಸಿ ತಂಡ ಇದ್ದ ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ದುಷ್ಕರ್ಮಿಗಳು ನಮ್ಮ ಪೊಲೀಸರ ಕಡೆಗೂ ಗುಂಡು ಹಾರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಕಾಸರಗೋಡು ಜಿಲ್ಲೆಯ ಪೊಲೀಸ್ ಅಧಿಕಾರಿಗಳೂ ಇಲ್ಲಿಗೆ ಭೇಟಿ ನೀಡಿದ್ದಾರೆ. ಬಂಧಿತರ ವಿಚಾರಣೆ ನಡೆಯುತ್ತಿದ್ದು ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.

- ಲಕ್ಮೀ ಪ್ರಸಾದ್, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿ ಕೇರಳ ಗಡಿ ಭಾಗವನ್ನು ಹೊಂದಿರುವುದರಿಂದ ಈ ಠಾಣೆಗೆ ಹೆಚ್ಚಿನ ಸಿಬ್ಬಂದಿಯ ಅಗತ್ಯ ಇದೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇರಳದಿಂದ ಕರ್ನಾಟಕ ಪ್ರವೇಶಿಸಲು ಹಲವಾರು ದಾರಿಗಳಿವೆ. ಈ ಎಲ್ಲಾ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದರೂ ಅಪರಾಧ ಚಟುವಟಿಕೆಗಳ ಕಡಿವಾಣಕ್ಕೆ ಪರಿಹಾರವಾಗದು. ವಿಟ್ಲ ಪೊಲೀಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನೀಡಿದರೆ ನಮಗೆ ಬೇಕಾದ ಹಾಗೆ ಅವರನ್ನು ವಿಂಗಡಿಸಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ.

- ದೇವಜ್ಯೋತಿ ರೇ, ಪಶ್ಚಿಮ ವಲಯದ ಐಜಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News