"ಕ್ಯಾಲಿಕಟ್‌ ನಲ್ಲಿ ವಾಸ್ಕೋಡಗಾಮನನ್ನು ಸ್ವಾಗತಿಸಿದ್ದು ನರೇಂದ್ರ ಮೋದಿ"

Update: 2021-03-26 16:21 GMT

"ಹೊಸದಿಲ್ಲಿ: ಹಲವು ಕಾಲಗಳ ವಿರಾಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ರವಾಸಕ್ಕೆಂದು ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ ನರೇಂದ್ರ ಮೋದಿ ಮಾಡಿದ ಭಾಷಣ ಸದ್ಯ ನಗೆಪಾಟಲಿಗೀಡಾಗುತ್ತಿದೆ. "ಬಾಂಗ್ಲಾದೇಶ ವಿಮೋಚನೆಯ ಸಂದರ್ಭದ ಸ್ವಾತಂತ್ರ್ಯ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ" ಎಂಬ ಅವರ ಹೇಳಿಕೆಯು ಸಾಮಾಜಿಕ ತಾಣದಾದ್ಯಂತ ಟ್ರೋಲ್‌ ಆಗುತ್ತಿದೆ. ಈ ನಡುವೆ #lielikemodi ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮವು ನನ್ನ ಜೀವನದ ಪ್ರಯಾಣದಲ್ಲಿ ಒಂದು ಮಹತ್ವದ ಕ್ಷಣವಾಗಿತ್ತು. ನನ್ನ ಸಹೋದ್ಯೋಗಿಗಳು ಮತ್ತು ನಾನು ಭಾರತದಲ್ಲಿ ಸತ್ಯಾಗ್ರಹ ಮಾಡಿದ್ದೆವು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸತ್ಯಾಗ್ರಹದ ಸಮಯದಲ್ಲಿ ಜೈಲಿಗೆ ಹೋಗಲು ನನಗೆ ಅವಕಾಶ ಸಿಕ್ಕಿತು "ಎಂದು ಅವರು ಹೇಳಿಕೆ ನೀಡಿದ್ದರು.

"ಪ್ರಧಾನಿ ಮೋದಿ ತಪ್ಪಿಯೂ ಸಹ ಒಂದು ಸತ್ಯ ಹೇಳುವುದಿಲ್ಲ" ಎಂದು ಸಾಮಾಜಿಕ ತಾಣದಲ್ಲಿ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್ ವ್ಯಂಗ್ಯವಾಡಿದ್ದಾರೆ. "ಬರ್ಲಿನ್‌ ಗೋಡೆ ಬಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅದರ ಮೇಲೆ ಕೂತಿದ್ದರು",ಕ್ಯಾಲಿಕಟ್‌ ನಲ್ಲಿ ವಾಸ್ಕೋಡಗಾಮನನ್ನು ಸ್ವಾಗತಿಸಿದ್ದು ನರೇಂದ್ರ ಮೋದಿ " ಎಂದು ಕಾಂಗ್ರೆಸ್‌ ವಕ್ತಾರ ಶ್ರೀವತ್ಸ ಟ್ವೀಟಿಸಿದ್ದಾರೆ.

"ಅವರನ್ನು ಯಾವಾಗ ಅರೆಸ್ಟ್‌ ಮಾಡಲಾಗಿತ್ತು? ಅದರ ಕುರಿತು ಫೈಲ್‌ ಗಳಲ್ಲಿ ಏನಾದರೂ ದಾಖಲೆಗಳಿವೆಯೇ? ಎಂದು ಮಾಜಿ ಐಎಫ್‌ ಎಸ್‌ ಆಫೀಸರ್‌ ಕೆಸಿ ಸಿಂಗ್‌ ಪ್ರಶ್ನಿಸಿದ್ದಾರೆ.

ಮೋದಿ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಅವರನ್ನು ಜೈಲುವಾಸ ಅನುಭವಿಸಿದ್ದರು ಎಂದು ಹೇಳುತ್ತಾರೆ. ಆದರೆ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಭಾರತ ಪಾಕಿಸ್ತಾನದೊಂದಿಗೆ ಯುದ್ಧ ಮಾಡುತ್ತಿರಲಿಲ್ಲವೇ? ಹಾಗಾದರೆ ಅವರು ಜೈಲಿಗೆ ಹೋದದ್ದಾದರೂ ಎಲ್ಲಿಗೆ? ಅವರು ಪಾಕಿಸ್ತಾನದಲ್ಲಿದ್ದರೇ? ” ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಂಯೋಜಕರಾದ ಗೌರವ್ ಪಾಂಡಿ ಟ್ವೀಟ್‌ ಮಾಡಿದ್ದಾರೆ.

'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News