×
Ad

​ಜಾತಿ ಶೋಷಣೆಯನ್ನು ಓದು ಬರಹದಿಂದಲೂ ಬದಲಾಯಿಸಲು ಆಗಿಲ್ಲ: ಆತ್ರಾಡಿ ಅಮೃತಾ ಶೆಟ್ಟಿ

Update: 2021-03-26 22:45 IST

ಉಡುಪಿ, ಮಾ.26: ಅಸ್ಪಶ್ಯತೆ, ಜಾತಿ ಪದ್ಧತಿ ಎಂಬುದು ಹಿಂದಿನಂತೆ ಇಲ್ಲದಿದ್ದರೂ ಈಗಲೂ ಇರುವುದು ಸತ್ಯ. ಸಮಾಜ ಬದಲಾವಣೆ ಯಾದರೂ ಕೆಳ ಜಾತಿಯವರ ಮೇಲಿನ ಶೋಷಣೆ ಅದೇ ರೀತಿಯಲ್ಲಿ ಈಗಲೂ ಇದೆ. ಅದನ್ನು ಯಾವುದೇ ಓದು ಬರಹದಿಂದಲೂ ಬದಲಾಯಿಸಲು ಆಗಿಲ್ಲ ಎಂದು ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿ ಹೇಳಿದ್ದಾರೆ.

ಸುಮನಸಾ ಕೊಡವೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ, ಪೇಜಾವರ ಅಧೋಕ್ಷಜ ಮಠ ಇವುಗಳ ಸಹಯೋಗದೊಂದಿಗೆ ಉಡುಪಿಯ ಭುಜಂಗ ಪಾರ್ಕಿನ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ ರಂಗಹಬ್ಬ-9 ನಾಟಕೋತ್ಸದ ಐದನೆ ದಿನವಾದ ಇಂದು ಪತ್ರಕರ್ತ ಬಾಲಕೃಷ್ಣ ಶಿಬಾರ್ಲ ಅವರ ತುಳುನಾಟಕ ಕೃಷಿ ‘ಕಾಪ’ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಜಾತಿಪದ್ಧತಿ, ಶೋಷಣೆ, ಅಸ್ಪಶ್ಯತೆಗಳನ್ನು ಹೋಗಲಾಡಿಸಲು ಮೊದಲು ನಮ್ಮ ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಆ ಬದಲಾವಣೆಗಳನ್ನು ನಾಟಕಗಳಿಂದ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಈ ನಾಟಕ ಎಲ್ಲರನ್ನು ತಲುಪುವಂತಾಗಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ರಂಗ ಕಲಾವಿದ ಸಂಜೀವ ಕರ್ಕೇರ ಅವರಿಗೆ ರಂಗ ಸಾಧಕ ಸನ್ಮಾನವನ್ನು ನೆರವೇರಿಸಲಾಯಿತು. ಕಲ್ಮಾಡಿ ಬ್ರಹ್ಮ ಬೈದೇರುಗಳ ಗರೋಡಿಯ ಪ್ರಮುಖ ಅಚ್ಯುತ ಅಮೀನ್, ನಗರಸಭೆ ಸದಸ್ಯ ದೇವದಾಸ್ ವಿ.ಶೆಟ್ಟಿಗಾರ್, ನಾರಾಯಣ ಗುರು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಉಪಾಧ್ಯಕ್ಷೆ ವಿಜಯ ಜಿ.ಬಂಗೇರ ಮುಖ್ಯ ಅತಿಥಿಗಳಾಗಿದ್ದರು.

ಕೃತಿಕಾರ ಬಾಲಕೃಷ್ಣ ಶಿಬಾರ್ಲ ಮಾತನಾಡಿದರು. ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಭೂಮಿಕಾ ಹಾರಾಡಿ ತಂಡದಿಂದ ‘ನಮ್ಮ ನಿಮ್ಮಿಳಗೊಬ್ಬ’, ಕನ್ನಡ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News