×
Ad

ಮಂಗಳೂರು: ನೇತ್ರಾವತಿ ಸೇತುವೆಯಲ್ಲಿ ಅಪಘಾತ: ಆಟೋ ಚಾಲಕ ಸ್ಥಳದಲ್ಲೇ ಮೃತ್ಯು

Update: 2021-03-27 10:58 IST

ಮಂಗಳೂರು, ಮಾ.27: ಆಟೋ ರಿಕ್ಷಾಕ್ಕೆ ಹಿಂದಿನಿಂದ ಕಾರೊಂದು ರಭಸದಿಂದ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ -66ರ ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಪಜೀರು ನಿವಾಸಿ, ಆಟೋ ಚಾಲಕ ಸಾಮ್ರಾಜ್ ಸಂಜೀವ್ ಪೂಜಾರಿ (45) ಮೃತಪಟ್ಟವರು ಎಂದು ತಿಳಿದುಬಂದಿದೆ.

 ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಆಟೋರಿಕ್ಷಾಕ್ಕೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಘಟನೆಗೆ ಕಾರು ಚಾಲಕನ ಅತಿ ವೇಗದ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಹೇಳಲಾಗಿದೆ.

 ಘಟನೆಯಲ್ಲಿ ಆಟೋ ರಿಕ್ಷಾದಿಂದ ಹೊರಗೆಸೆಯಲ್ಪಟ್ಟ ಚಾಲಕ ಕಾರಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಆಕ್ರೋಶಿತ ಸ್ಥಳೀಯರು ಕಾರು ಚಾಲಕನ ಮೇಲೆ ಹಲ್ಲೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಸ್ಥಳಕ್ಕೆ ಧಾವಿಸಿದ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಉದ್ರಿಕ್ತರ ಗುಂಪನ್ನು ಚದುರಿಸಿ, ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ರಿಕ್ಷಾ ಚಾಲಕನ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕಾರು ಕೇರಳದ ಪಾಸಿಂಗ್ ಹೊಂದಿದ್ದು, ತಲಪಾಡಿ ಮೂಲಕ‌ ಕಾಸರಗೋಡಿನತ್ತ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ರಿಕ್ಷಾ ಹಾಗೂ ಕಾರು ಜಖಂಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News