×
Ad

ಕಾಸರಗೋಡು: ಮತಯಂತ್ರದಲ್ಲಿ ಉಳಿದ ಪಕ್ಷಗಳ ಚಿಹ್ನೆಗಿಂತ ತಾವರೆ ಚಿಹ್ನೆ ಗಾತ್ರ ಹಿರಿದು: ಯುಡಿಎಫ್ ಆಕ್ಷೇಪ

Update: 2021-03-27 14:58 IST

ಕಾಸರಗೋಡು, ಮಾ.27: ಕಾಸರಗೋಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಯಂತ್ರಗಳಲ್ಲಿ ಅಳವಡಿಸುವ ಪಕ್ಷಗಳ ಚಿಹ್ನೆಗಳಲ್ಲಿ ಗಾತ್ರದಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆಕ್ಷೇಪಿಸಿ ಯುಡಿಎಫ್ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. ದೂರಿನ ಹಿನ್ನೆಲೆಯಲ್ಲಿ ಮತಯಂತ್ರಗಳಿಗೆ ಚಿಹ್ನೆಗಳ ಅಳವಡಿಕೆ ಹಾಗೂ ತಪಾಸಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆಯಿಂದ ಅಭ್ಯರ್ಥಿಗಳ ಏಜಂಟರುಗಳ ಸಮ್ಮುಖದಲ್ಲಿ ಮತ ಯಂತ್ರಗಳ ತಪಾಸಣೆ ನಡೆಸಲಾಗಿದ್ದು, ಈ ಸಂದರ್ಭ ಬಿಜೆಪಿ ಅಭ್ಯರ್ಥಿಯ ಫೋಟೋ ಎದುರಿರುವ ಆ ಪಕ್ಷದ ಗುರುತಾದ ತಾವರೆ ಚಿಹ್ನೆ ಉಳಿದ ಪಕ್ಷಗಳ ಚಿಹ್ನೆಗಳಿಗಿಂತ ದೊಡ್ಡ ಗಾತ್ರದಲ್ಲಿ ಮುದ್ರಿತವಾಗಿರುವುದು ಗಮನಕ್ಕೆ ಬಂದಿದೆ. ಇದೇವೇಳೆ ಯುಡಿಎಫ್ ನ ಏಣಿ ಚಿಹ್ನೆಯ ಗಾತ್ರ ಸಣ್ಣದಾಗಿದೆ ಎಂದು ಆರೋಪಿಸಿ ಯುಡಿಎಫ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎನ್.ಎ.ನೆಲ್ಲಿಕುನ್ನುರವರು ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತಯಂತ್ರಕ್ಕೆ ಚಿಹ್ನೆ ಅಳವಡಿಕೆ ಹಾಗೂ ಪರಿಶೀಲನೆಯನ್ನು  ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿಯವರು ಯುಡಿಎಫ್ ಅಭ್ಯರ್ಥಿ ಸಲ್ಲಿಸಿರುವ ದೂರನ್ನು ರಾಜ್ಯ ಚುನಾವಣಾಧಿಕಾರಿವರಿಗೆ ಹಸ್ತಾ೦ತರಿಸಿದ್ದು, ರಾಜ್ಯ ಚುನಾವಣಾ ಆಯೋಗದ ಮುಂದಿನ ಸೂಚನೆಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಿದೆ.

ಈ ನಡುವೆ ಮಾತನಾಡಿರುವ ಎನ್.ಎ.ನೆಲ್ಲಿಕುನ್ನು ಹಾಗೂ ನ್ಯಾಯವಾದಿ ಎ.ಗೋವಿಂದನ್ ನಾಯರ್
ಚುನಾವಣಾ ಅಕ್ರಮಕ್ಕೆ ಇದೊಂದು ಉದಾಹರಣೆ, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News