×
Ad

ಗುರುಪುರ: ಶಾಲಾ ಬಾಲಕಿಗೆ ನಿರಂತರ ಲೈಂಗಿಕ ಕಿರುಕುಳ; ಮೂವರು ಆರೋಪಿಗಳ ಬಂಧನ

Update: 2021-03-27 15:28 IST

ಮಂಗಳೂರು, ಮಾ.27: ನಗರದ ಹೊರವಲಯದ ಗುರುಪುರ ವ್ಯಾಪ್ತಿಯಲ್ಲಿನ 14 ವರ್ಷದ ಶಾಲಾ ಬಾಲಕಿಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೂವರನ್ನು ಮಂಗಳೂರು ಪೊಲೀಸರು ಶನಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಪೊಳಲಿ ನಿವಾಸಿ ಮುಹಮ್ಮದ್ ಮುನೀರ್ (28), ಕೈಕಂಬ ನಿವಾಸಿಗಳಾದ ತಸ್ವಿನ್ ಹಾಗೂ ಸಾದಿಕ್ ಬಂಧಿತ ಆರೋಪಿಗಳು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತ ಮುನೀರ್ ಪ್ರಧಾನ ಆರೋಪಿಯಾಗಿದ್ದು, ಇನ್ನುಳಿದವರು ಆತನಿಗೆ ಸಹಕಾರ ನೀಡಿದ್ದಾರೆ. ಈ ಸಂಬಂಧ ಇನ್ನೂ ಹಲವರನ್ನು ಬಂಧಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಗುರುಪುರ-ಕೈಕಂಬ ಪರಿಸರದಲ್ಲಿ ಶಾಲೆಗೆ ತೆರಳುವ ಮಾರ್ಗದಲ್ಲಿ ಅಲ್ಲಲ್ಲಿ ಯುವಕರ ಗುಂಪು ಇರುತ್ತದೆ. ವಿದ್ಯಾರ್ಥಿನಿಯರು, ಯುವತಿಯರೇ ಇವರ ಟಾರ್ಗೆಟ್. ಆರಂಭದಲ್ಲಿ ಸ್ನೇಹ ಬೆಳೆಸಿ, ತಿಂಡಿ-ತಿನಿಸು ಕೊಡಿಸುವುದು, ಇತರ ವಸ್ತುಗಳನ್ನು ತೋರಿಸಿ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ನಂತರ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನೀಡುತ್ತಿರುವುದು ಕಂಡುಬಂದಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವಂತೆ ಕಾಣಿಸುತ್ತಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಪ್ರಧಾನ ಆರೋಪಿ ಮುನೀರ್ ಶಾಲೆಯ ಸಮೀಪ ನಿಂತುಕೊಂಡು ಬಾಲಕಿಗೆ ಆಮಿಷವೊಡ್ಡಿ ಸ್ನೇಹ ಬೆಳೆಸಿದ್ದಾನೆ. ವಸ್ತುಗಳನ್ನು ಗಿಫ್ಟ್ ಕೊಡುವ ಮೂಲಕ ಆಕರ್ಷಿಸಿದ್ದಾನೆ. ಕೊನೆಗೆ ಬಾಲಕಿಯಿಂದ ಮೊಬೈಲ್ ನಂಬರ್ ಪಡೆದು ಪ್ರೀತಿಯ ಬಲೆಗೆ ಬೀಳಿಸಿ, ಆಕೆಯ ಖಾಸಗಿ ಫೋಟೊ, ವೀಡಿಯೊಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ಲೈಂಗಿಕವಾಗಿ ಸಹಕರಿಸದಿದ್ದಲ್ಲಿ ಫೋಟೊ, ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಹೀಗೆ ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದರು.

ಬಾಲಕಿಗೆ ಕಿರುಕುಳ ನೀಡುತ್ತಿರುವುದು ಪೋಷಕರ ಗಮನಕ್ಕೆ ಬಂದ ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಮೂವರ ಬಂಧನವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪೈಕಿ ಮುನೀರ್ ವೃತ್ತಿಯಲ್ಲಿ ಚಾಲಕ. ಉಳಿದವರು ಕೂಡ ಅಪರಾಧದ ಇತಿಹಾಸ ಹೊಂದಿದ್ದಾರೆ ಎಂದರು.

*ಸಂತ್ರಸ್ತರು ಮಾಹಿತಿ ನೀಡಲು ಕಮಿಷನರ್ ಮನವಿ: ಗುರುಪುರ ವ್ಯಾಪ್ತಿಯಲ್ಲಿ ಬಾಲಕಿಯರು, ಯುವತಿಯನ್ನು ಗುರಿಯಾಗಿಸಿಕೊಂಡು, ಪುಸಲಾಯಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬೃಹತ್ ಜಾಲ ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇನ್ನು ಹಲವು ಕಿರುಕುಳ ಪ್ರಕರಣಗಳು ನಡೆದಿರುವ ಶಂಕೆ ಇದೆ. ಸಂತ್ರಸ್ತರು ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಏನಂತಾರೆ ಸ್ಥಳೀಯರು?

ಗುರುಪುರ ಕೈಕಂಬ ವ್ಯಾಪ್ತಿಯಲ್ಲಿ ಯುವಕರ ತಂಡವೊಂದು ಐಷಾರಾಮಿ ಕಾರುಗಳಲ್ಲಿ ಸುತ್ತಾಡುತ್ತಾ ಅಮಾಯಕ ಶಾಲಾ ಬಾಲಕಿ, ವಿದ್ಯಾರ್ಥಿನಿಯರು, ಯುವತಿಯರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ. ಸೂಟು ಬೂಟು ಹಾಕಿಕೊಂಡು, ಯಾರದ್ದೋ ಬಾಡಿಗೆ ಐಷಾರಾಮಿ ಕಾರುಗಳಲ್ಲಿ ಸುತ್ತಾಡುವ ಯುವಕರ ಕಾರು-ಬಾರು ನೋಡಿ ಯುವತಿಯರು ತಮಗೆ ಅರಿವಿಲ್ಲದಂತೆ ಇವರ ಮೋಸದ ವ್ಯೂಹಕ್ಕೆ ಬೀಳುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯರು, ಯುವತಿಯರ, ಗಂಡ ವಿದೇಶದಲ್ಲಿರುವ ಮಹಿಳೆಯರ ಮೊಬೈಲ್ ನಂಬರ್ ಪಡೆದು ಪ್ರೀತಿ-ಪ್ರೇಮದ ಹೆಸರಿನಲ್ಲಿ ಅವರೊಂದಿಗೆ ಚಾಟಿಂಗ್ ಮಾಡುತ್ತಾ ಐಷಾರಾಮಿ ಕಾರುಗಳಲ್ಲಿ ಅವರನ್ನು ಸುತ್ತಾಡಿಸುತ್ತಾ ಕೊನೆಗೆ ಅನೈತಿಕತೆಗೆ ಬಳಸಿಕೊಳ್ಳಲಾಗುತ್ತಿದೆ. ಅದನ್ನು ವೀಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುವ ಪುಂಡು-ಪೋಕರಿಗಳ ಹಲವು ಗುಂಪುಗಳು ಈ ಪ್ರದೇಶದಲ್ಲಿ ಸಕ್ರಿಯವಾಗಿವೆ ಎನ್ನುತ್ತಾರೆ ಸ್ಥಳೀಯರು.

ಹಲವು ಸಂದರ್ಭಗಳಲ್ಲಿ ಬ್ಲಾಕ್‌ಮೇಲ್‌ಗೆ ಒಳಗಾದಾಗ ಮಾನ, ಮರ್ಯಾದೆಗೆ ಹೆದರಿ ಕೆಲವರು ಚಿನ್ನ, ಒಡವೆ ಕೊಟ್ಟು ಕೈ ತೊಳೆದುಕೊಂಡರೆ, ಅವರ ಬೇಡಿಕೆಗೆ ಒಪ್ಪದೆ ಇದ್ದರೆ ಖಾಸಗಿ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿ ದುಡ್ಡು ಪೀಕಿಸುತ್ತಾರೆ. ಪ್ರತಿಷ್ಠಿತರ ಅಭಯವು ಈ ಜಾಲಕ್ಕಿದೆ ಎಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News