ಉಡುಪಿ ಗ್ರಾಪಂ ಉಪ ಚುನಾವಣೆ: ಸಂತೆ, ಜಾತ್ರೆ, ಮದ್ಯ ಮಾರಾಟ ನಿಷೇಧ
ಉಡುಪಿ, ಮಾ.27: ಜಿಲ್ಲೆಯಲ್ಲಿ ಮಾ.29ರಂದು ನಡೆಯಲಿರುವ ಗ್ರಾಪಂ ಉಪ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕರು ಮತ ಹಾಕಲು ಅನುಕೂಲವಾಗುವಂತೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಪಂ, ಕಾಪು ತಾಲೂಕಿನ ಶಿರ್ವ ಗ್ರಾಪಂನ ಕ್ಷೇತ್ರ ನಂ.12, ಕುಂದಾಪುರ ತಾಲೂಕಿನ ಕುಂಬಾಶಿ ಗ್ರಾಪಂನ ಕ್ಷೇತ್ರ 3ರ ವ್ಯಾಪ್ತಿಯಲ್ಲಿ ಸಂತೆ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ದೇವಸ್ಥಾನಗಳಲ್ಲಿ ಜಾತ್ರೆಯ ಬಗ್ಗೆ ನಡೆಯುವ ಧಾರ್ಮಿಕ ಆಚರಣೆಗಳನ್ನು ದೇವಸ್ಥಾನದ ಸಿಬ್ಬಂದಿಗಳು ಮಾತ್ರ ಸೇರಿಕೊಂಡು ಸರಳವಾಗಿ ಆಚರಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮದ್ಯ ಮಾರಾಟ ನಿಷೇಧ: ಉಪ ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆಯ ವೇಳೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮಾ.27ರ ಸಂಜೆ 5 ರಿಂದ ಮಾ.29ರ ಸಂಜೆ 5 ಗಂಟೆಯವರೆಗೆ ಎಲ್ಲಾ ಮೂರು ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಗೆಯ ಮದ್ಯದ ಅಂಗಡಿಗಳನ್ನು ಮುಚ್ಚಲು ಹಾಗೂ ಮದ್ಯ ಸಾಗಾಟ, ಶೇಖರಣೆ ಮತ್ತು ಮಾರಾಟ ಮಾಡುವುದನ್ನು ನಿಸೇಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ವೇತನ ಸಹಿತ ರಜೆ: ಚುನಾವಣೆ ನಡೆಯುವ ಗ್ರಾಪಂಗಳ ಮತ ಕ್ಷೇತ್ರಗಳಲ್ಲಿರುವ ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳ, ಎಲ್ಲಾ ಶೈಕ್ಷಣಿಕ ಸಂಸ್ಥೆಗಳ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳ, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್‌ಗಳ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳ, ಉಳಿದ ಕೈಗಾರಿಕಾ ಸಂಸ್ಥೆಗಳ ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ, ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಎಸ್ಟಾಬ್ಲಿಶ್‌ಮೆಂಟ್‌ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಮತದಾನ ಮಾಡಲು ಅನುಕೂಲ ವಾಗುವಂತೆ ಮಾ. 29 ರಂದು ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.