ಕನ್ಯಾನ: ನಮ್ಮ ಭೂಮಿಯಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಗಾರ
ಕುಂದಾಪುರ, ಮಾ.27: ತಾಲೂಕಿನ ಕನ್ಯಾನದ ನಮ್ಮ ಭೂಮಿಯಲ್ಲಿ ಸೆಲ್ಕೋ ಎನರ್ಜಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಮಣಿಪಾಲ, ತೋಟಗಾರಿಕೆ ಇಲಾಖೆ ಕುಂದಾಪುರ, ಪಶು ವೈದ್ಯಾಧಿಕಾರಿಗಳು ಕುಂದಾಪುರ ಮತ್ತು ಕನ್ಸರ್ನ್ಡ್‌ಫಾರ್ ವರ್ಕಿಂಗ್ ಚಿಲ್ಡ್ರನ್ (ಸಿಡಬ್ಲ್ಯೂಸಿ) ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಳೀಯ ಸಮುದಾಯಕ್ಕೆ ಸ್ವಉದ್ಯೋಗದ ಮಾಹಿತಿ ಕಾರ್ಯಗಾರ ಗುರುವಾರ ನಡೆಯಿತು.
ಸೆಲ್ಕೋ ಎನರ್ಜಿ ಸಂಸ್ಥೆಯ ಗುರುಪ್ರಕಾಶ ಶೆಟ್ಟಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕಿ ನವ್ಯ, ಸಿಡಬ್ಲ್ಯೂಸಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಶಿವಮೂರ್ತಿ ಭಂಡಾರ್ಕರ್ ಮತ್ತು ನಮ್ಮಭೂಮಿಯ ಮಕ್ಕಳ ಪಂಚಾಯತ್‌ನ ಅಧ್ಯಕ್ಷ ಪ್ರೀತಮ್ ಅವರು ಒಂದಾಗಿ ಗಿಡಕ್ಕೆ ಗೊಬ್ಬರ ಮತ್ತು ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸೆಲ್ಕೋ ಎನರ್ಜಿಯ ಗುರುಪ್ರಕಾಶ ಶೆಟ್ಟಿ ಮಾತನಾಡಿ, ಹಳ್ಳಿಯಲ್ಲಿ ದಿನನಿತ್ಯದ ಬಳಕೆಯ ವಸ್ತುಗಳನ್ನು ಪಟ್ಟಿ ಮಾಡಿ ಅದರಲ್ಲಿ ಹೆಚ್ಚು ಹೆಚ್ಚು ವಸ್ತುಗಳನ್ನು ಹಳ್ಳಿಯಲ್ಲಿಯೇ ಉತ್ಪಾದಿಸುವಂತಾದರೆ ಹಳ್ಳಿಯ ಜನ ವಲಸೆ ಹೋಗುವುದನ್ನು ತಪ್ಪಿಸಬಹುದು ಅಲ್ಲದೇ ಹಳ್ಳಿಯಲ್ಲಿಯೇ ಸ್ವಾವಲಂಬಿ ಜೀವನ ನಡೆಸಬಹುದು ಎಂದರು.
ಮಣಿಪಾಲ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ನವ್ಯ ಮಾತನಾಡಿ, ಸ್ವಉದ್ಯೋಗದ ಬಗ್ಗೆ ಇರುವ ಹಿಂಜರಿಕೆ ಮತ್ತು ಕೀಳರಿಮೆ ಭಾವನೆಗಳನ್ನು ತೆಗೆದು ಹಾಕಿ ಆತ್ಮವಿಶ್ವಾಸದಿಂದ ಸ್ವಉದ್ಯೋಗವನ್ನು ಪ್ರಾರಂಭಿಸಿ. ಇಂದಿನ ದಿನಗಳಲ್ಲಿ ಸ್ವ ಉದ್ಯೋಗ ಎಂಬುದು ಅನಿವಾರ್ಯವೂ ಆಗಿದೆ ಎಂದರು.
ಕುಂದಾಪುರದ ಪಶುವೈದ್ಯಾಧಿಕಾರಿ ಡಾ. ಸಂತೋಷ, ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯಲ್ಲಿ ಸ್ವಚ್ಛತೆ ಮತ್ತು ಪೌಷ್ಠಿಕ ಆಹಾರ ನೀಡುವುದು ಹಾಗೂ ಈ ಉದ್ಯೋಗದಿಂದ ಸಿಗುವ ಲಾಭದ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರ ತೋಟಗಾರಿಕಾ ಇಲಾಖೆಯ ಕಿರಿಯ ಸಹಾಯಕ ನಿರ್ದೇಶಕ ಸಂಜೀವ ನಾಯ್ಕೆ, ಕೃಷಿ ಪೂರಕ ಉದ್ಯೋಗಗಳು ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಮುದಾಯದ ಮಹಿಳೆಯರು, ಪುರುಷರು ಮತ್ತು ನಮ್ಮಭೂಮಿಯ ತರಬೇತಿ ಮಕ್ಕಳು, ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದ್ದರು.