ನೂತನ ಕೈಗಾರಿಕಾ ನೀತಿ ಕುರಿತ ಸಂವಾದ: ‘ಕೈಗಾರಿಕಾ ವಲಯಕ್ಕೆ ಸರಕಾರ ಸೌಕರ್ಯ ಕಲ್ಪಿಸಲಿ’
ಮಂಗಳೂರು, ಮಾ.27: ರಾಜ್ಯದ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕಾ ವಲಯಗಳನ್ನು ನಿರ್ಲಕ್ಷ ಮಾಡದೆ ಸೂಕ್ತ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸಲು ಸರಕಾರ ಮುಂದಾಗಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ರಾಜ್ಯಾಧ್ಯಕ್ಷ ಕೆ.ಬಿ. ಅರಸಪ್ಪ ಒತ್ತಾಯಿಸಿದ್ದಾರೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಬೈಕಂಪಾಡಿಯ ಕೆನರಾ ಕೈಗಾರಿಕೆಗಳ ಸಂಘದ ಸಭಾಭವನದಲ್ಲಿ ಶನಿವಾರ ‘ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು, ಕಾರ್ಮಿಕ ಕಾಯ್ದೆಯ ಇತ್ತೀಚಿನ ತಿದ್ದುಪಡಿ’ಗಳ ಕುರಿತು ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ಸಣ್ಣ ಕೈಗಾರಿಕೆಗಳು ಸಾವಿರಾರು ಕೋಟಿ ರೂ. ತೆರಿಗೆ ನೀಡುತ್ತಿವೆ. ಕಡಿಮೆ ಶಿಕ್ಷಣ ಹೊಂದಿರುವ ಸಾವಿರಾರು ಯುವಕರಿಗೆ ಉದ್ಯೋಗ ನೀಡಿ ಅವರು ದಾರಿ ತಪ್ಪದಂತೆ ನೋಡಿಕೊಳ್ಳುತ್ತಿವೆ. ಹಾಗಾಗಿ ಸಣ್ಣ ಕೈಗಾರಿಕೆಗಳನ್ನು ಸರಕಾರ ನಿರ್ಲಕ್ಷ ಮಾಡಬಾರದು. ನೀರು, ವಿದ್ಯುತ್, ಸುಸಜ್ಜಿತ ರಸ್ತೆ ಇತ್ಯಾದಿ ಮೂಲ ಸೌಕರ್ಯಗಳನ್ನು ಕೈಗಾರಿಕಾ ವಲಯಗಳಿಗೆ ನೀಡಬೇಕು ಎಂದು ಅವರು ಹೇಳಿದರು.
ಮಂಗಳೂರು ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲೂ ಸಾಕಷ್ಟು ಸಮಸ್ಯೆಗಳು ಕಂಡುಬಂದಿವೆ. ಪ್ರಮುಖ ಬಂದರನ್ನು ಹೊಂದಿದ್ದರೂ ಅಲ್ಲಿಗೆ ಸರಿಯಾದ ಸಂಪರ್ಕದ ಕೊರತೆಯಿದೆ. ಇಡೀ ರಾಜ್ಯ ಮತ್ತು ಮಂಗಳೂರಿನ ಕೈಗಾರಿಕೆಗಳ ಹಿತದೃಷ್ಟಿಯಿಂದ ಈ ಸಮಸ್ಯೆಯನ್ನು ಆದ್ಯತೆ ನೆಲೆಯಲ್ಲಿ ಕೈಗೆತ್ತಿ ಕೊಂಡು ಪರಿಹಾರ ಕಂಡುಕೊಳ್ಳಬೇಕಿದೆ. ಜತೆಗೆ ಸಕಲೇಶಪುರದಿಂದ ಉಪ್ಪಿನಂಗಡಿವರೆಗಿನ ಯೋಜಿತ ಟ್ಯೂಬ್ ರೋಡ್ ಯೋಜನೆಯನ್ನೂ ತ್ವರಿತವಾಗಿ ಜಾರಿಗೊಳಿಸಬೇಕಾಗಿದೆ ಎಂದು ಅರಸಪ್ಪ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಎಂಎಸ್‌ಎಂಇ ಮತ್ತು ಪಿಪಿ) ಅಪರ ನಿರ್ದೇಶಕ ಎಚ್.ಎಂ. ಶ್ರೀನಿವಾಸ್ ಮಾತನಾಡಿ, ಹೊಸದಾಗಿ ಉದ್ಯಮ ಆರಂಭಿಸುವವರು, ಉದ್ಯಮ ವಿಸ್ತರಣೆ ಸೇರಿದಂತೆ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಸರಕಾರದಿಂದ ಹಲವು ಸಹಾಯ ಧನಗಳನ್ನು ನೂತನ ಕೈಗಾರಿಕಾ ನೀತಿಯಲ್ಲಿ ಘೋಷಿಸಲಾಗಿದೆ. ಕುಶಲಕರ್ಮಿಗಳಿಗೆ ಈವರೆಗೂ ಕೈಗಾರಿಕಾ ನೀತಿಯಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ. ಆದರೆ ನೂತನ ನೀತಿಯಲ್ಲಿ ಕುಶಲಕರ್ಮಿಗಳಿಗೆ ಘಟಕ ಸ್ಥಾಪಿಸಲು ಶೇ.4ರ ಬಡ್ಡಿದರದಲ್ಲಿ ಸಾಲ, ಅವರ ಉತ್ಪನ್ನ ಮಾರಾಟ ಮಾಡುವ ಸಂಸ್ಥೆಗೆ ಶೇ.10 ಮಾರುಕಟ್ಟೆ ಅಭಿವೃದ್ಧಿ ಸಹಾಯಧನ, ಯಂತ್ರೋಪಕರಣಕ್ಕೆ ಶೇ.75 ಸಹಾಯಧನ, ತರಬೇತಿ ನೀಡಲಾಗುತ್ತದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಕೆನರಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಜಿತ್ ಕಾಮತ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಶಾಲ್ ಎಲ್. ಸಾಲಿಯಾನ್, ಕೆನರಾ ಲಿಬರ್ಸ್ ಇಂಡಿಯಾ ಪ್ರೈ.ಲಿ.ನ ಮಾನವ ಸಂಪನ್ಮೂಲ ವ್ಯವಸ್ಥಾಪಕ ಗೋವಿಂದ ರಾಜು, ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಎನ್.ಆರ್. ಜಗದೀಶ್, ಜಂಟಿ ಕಾರ್ಯದರ್ಶಿ ಚನ್ನಬಸಪ್ಪ ಸಿ. ಹೊಂಡದಕಟ್ಟಿ, ಖಜಾಂಚಿ ಎಸ್. ಶಂಕರನ್, ಲೇಬರ್ ಪ್ಯಾನಲ್ ಅಧ್ಯಕ್ಷ ಎಸ್. ನಾಗರಾಜು, ಮಂಗಳೂರು ಗ್ರಾಮೀಣಾಭಿವೃದ್ಧಿ ಸಮಿತಿ ಪ್ಯಾನಲ್ ಅಧ್ಯಕ್ಷ ಅರುಣ್ ಪಡಿಯಾರ್ ಭಾಗವಹಿಸಿದ್ದರು.